Kundapra.com ಕುಂದಾಪ್ರ ಡಾಟ್ ಕಾಂ

ವಿಭಿನ್ನವಾದ ಯೋಚನೆಯೇ ಸಾಧನೆಯ ಮಾರ್ಗ: ಸುಂದರ್‌ ಎಸ್. ಮಾಳ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ
ಅತಿಯಾದ ಭಾವನಾತ್ಮಕತೆ ಅಥವಾ ಅತಿಯಾದ ಪ್ರಾಯೋಗಿಕ ಮನೋಭಾವ ಇವೆರಡೂ ಸಾಧನೆಗೆ ಅಡ್ಡಿಯಾಗಬಹುದು. ಭಾವನೆ ಮತ್ತು ಪ್ರಾಯೋಗಿಕತೆಯನ್ನು ಸಮತೋಲನದಲ್ಲಿ ಅಳವಡಿಸಿಕೊಂಡು, ವಿಭಿನ್ನವಾಗಿ ಹಾಗೂ ಸೃಜನಾತ್ಮಕವಾಗಿ ಯೋಚಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ನಿಜವಾದ ಸಾಧನೆ ಸಾಧ್ಯ ಎಂದು ಮಂಗಳೂರು ಶಾಖೆಯ ಎಮ್‌ಎಸ್‌ಎಮ್‌ಇ ಅಭಿವೃದ್ಧಿ ಘಟಕದ ಸಹಾಯಕ ನಿರ್ದೇಶಕ ಸುಂದರ್ ಎಸ್. ಮಾಳ ನುಡಿದರು.

ಅವರು ಆಳ್ವಾಸ್ ಆಯುರ್ವೇದ ಕಾಲೇಜಿನ ಆತ್ಮ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಒಂದು ದಿನದ ವಿಚಾರ ಸಂಕಿರಣವನ್ನು ಕಾಲೇಜಿನ ವಿಎಸ್ ಆಚಾರ್ಯ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.  

ಮುಖ್ಯ ಅತಿಥಿಯಾಗಿ ಕೇರಳ ರಾಜ್ಯದ ಇಡುಕ್ಕಿಯ ನಾಗಾರ್ಜುನ ಹರ್ಬಲ್ ಕನ್ಸಂಟ್ರೇಟ್ಸ್ ಲಿಮಿಟೆಡ್ ಸಂಸ್ಥೆಯ ಉತ್ಪನ್ನ ವಿಭಾಗದ ಸಹಾಯಕ ವ್ಯವಸ್ಥಾಪಕ ಡಾ. ಅಶ್ವಿನ್‌ ಎ.ಎಸ್. ಮಾತನಾಡಿ, ಸಂಶೋಧನಾ ಕ್ಷೇತ್ರದಲ್ಲಿ ಗುಣಮಟ್ಟದ ಮಹತ್ವವನ್ನು ಒತ್ತಿಹೇಳಿದ ಅವರು, ಔಷಧ ಉತ್ಪನ್ನಗಳಲ್ಲಿ ರೋಗಿಗಳ ಸುರಕ್ಷತೆ, ಉನ್ನತ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆ  ಅತ್ಯಂತ ಪ್ರಮುಖ ಅಂಶಗಳಾಗಿವೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಆಧುನಿಕ ಚಿಂತನೆ ಮತ್ತು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಇದಲ್ಲದೆ, ಉತ್ಪನ್ನದ ಸಂಸ್ಕರಣೆ ಮತ್ತು ಪ್ಯಾಕಿಂಗ್ ಕ್ರಮಗಳು ಕೂಡ ಗುಣಮಟ್ಟ ಕಾಪಾಡುವಲ್ಲಿ ಹಾಗೂ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸುಶೀಲ್ ಶೆಟ್ಟಿ, ವೈದ್ಯಕೀಯ ಆಯುರ್ವೇದ ಕಾಲೇಜಿನ ಅಧೀಕ್ಷಕರಾದ ಡಾ. ಸುರೇಖಾ ಪೈ, ಸ್ನಾತಕೋತ್ತರ ವೈದ್ಯಕೀಯ ಆಯುರ್ವೇದ ಕಾಲೇಜಿನ ಡೀನ್  ಡಾ. ಮಂಜುನಾಥ ಭಟ್, ಆಯುರ್ವೇದ ಪದವಿ ಕಾಲೇಜಿನ ಡೀನ್ ಡಾ. ಸ್ವಪ್ನ ಕುಮಾರಿ, ಆತ್ಮ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಸುಬ್ರಹ್ಮಣ್ಯ ಪದ್ಯಾಣ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಗೀತಾ ಬಿ. ಮಾರ್ಕಂಡೆ ನಿರೂಪಿಸಿ, ಡಾ. ಸುಬ್ರಹ್ಮಣ್ಯ ಪದ್ಯಾಣ ಸ್ವಾಗತಿಸಿ, ಡಾ. ಎಂ. ಎಸ್. ಕೃಷ್ಣಮೂರ್ತಿ ವಂದಿಸಿದರು.

Exit mobile version