Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಹಳೆಯ ಪ್ರೇಯಸಿಯ ಹೆಸರಿನಲ್ಲಿ ಯುವಕನಿಗೆ 1.80 ಲಕ್ಷ ರೂ. ವಂಚನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಹಳೆಯ ಪ್ರೇಯಸಿಯ ಹೆಸರಿನಲ್ಲಿ ಚಾಟ್ ಮಾಡಿ ಯುವಕನೊಬ್ಬನಿಂದ ಸುಮಾರು 1.80 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಇಲ್ಲಿನ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಹೊಸಂಗಡಿ ಗ್ರಾಮದ ನಿವಾಸಿ ರವಿಚಂದ್ರು (29) ಎಂಬುವವರು ಈ ಹಿಂದೆ ಹೊಸನಗರ ತಾಲೂಕಿನ ಅನುಷಾ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಇವರ ಪ್ರೇಮಕ್ಕೆ ಪೋಷಕರ ವಿರೋಧವಿದ್ದ ಕಾರಣ, ಮೂರು ವರ್ಷಗಳ ಹಿಂದೆ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಯುವ ಮೂಲಕ ಈ ಪ್ರಕರಣ ಇತ್ಯರ್ಥಗೊಂಡಿತ್ತು.

ಆದರೆ, ಕಳೆದ ಅಕ್ಟೋಬರ್ 24, 2025 ರಂದು ಅನುಷಾ ಹಿಂದೆ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯಿಂದ ರವಿಚಂದ್ರ ಅವರ ವಾಟ್ಸಾಪ್‌ಗೆ ಹುಟ್ಟುಹಬ್ಬದ ಶುಭಾಶಯ’ದ ಸಂದೇಶ ಬಂದಿದೆ. ಇದನ್ನು ಅನುಷಾಳೇ ಕಳುಹಿಸಿದ್ದಾಳೆಂದು ನಂಬಿದ ರವಿಚಂದ್ರ ಮರು ಸಂದೇಶ ಕಳುಹಿಸಿದ್ದು, ಇಬ್ಬರ ನಡುವೆ ಚಾಟಿಂಗ್ ಆರಂಭವಾಗಿದೆ.

ಚಾಟಿಂಗ್ ಮಾಡುತ್ತಿದ್ದ ವ್ಯಕ್ತಿ ದಿವ್ಯಾ ತನಗೆ ಮನೆಯಲ್ಲಿ ತುಂಬಾ ಸಮಸ್ಯೆಯಿದೆ ಎಂದು ನಂಬಿಸಿ ಹಣದ ಅವಶ್ಯಕತೆ ಇದೆ ಎಂದು ಕೇಳಿಕೊಂಡಿದ್ದಾಳೆ, ಇದನ್ನು ನಿಜವೆಂದು ನಂಬಿದ ರವಿಚಂದ್ರ ಅವರು ದಿನಾಂಕ ನ.3, 2025 ರಿಂದ ಫೆ.13, 2026 ರ ನಡುವೆ ಹಂತ ಹಂತವಾಗಿ ಸ್ಕ್ಯಾನರ್ ಮೂಲಕ ವಿವಿಧ ಬ್ಯಾಂಕ್‌ ಖಾತೆಗಳಿಗೆ 1,80,200/-ರೂಪಾಯಿ ಹಣವನ್ನು ವರ್ಗಾಯಿಸಿದ್ದಾರೆ.

ಆರೋಪಿತೆ ದಿವ್ಯಾ ಎಂಬಾಕೆ ರವಿಚಂದ್ರ ಅವರೊಂದಿಗೆ ಫೋನ್‌ನಲ್ಲಿ ಮಾತನಾಡದೆ ಕೇವಲ ವಾಟ್ಸಾಪ್ ಮತ್ತು ಇನ್ಮಾಗ್ರಾಮ್ ಮೂಲಕವೇ ಸಂದೇಶ ವಿನಿಮಯ ಮಾಡುತ್ತಿದ್ದಳು. ಅನುಷಾಳಂತೆ ನಟಿಸಿ ಹಣ ಪಡೆದು ವಂಚಿಸುತ್ತಿರುವುದು ರವಿಚಂದ್ರ ಅವರಿಗೆ ತಡವಾಗಿ ಅರಿವಿಗೆ ಬಂದಿದೆ. ಮೋಸ ಹೋಗಿರುವುದು ಖಚಿತವಾಗುತ್ತಿದ್ದಂತೆ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪುಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version