Kundapra.com ಕುಂದಾಪ್ರ ಡಾಟ್ ಕಾಂ

ಗ್ರಾಮೀಣ ಕ್ರೀಡೆ ಹಾಗೂ ಕ್ರೀಡಾಪಟುವಿಗೆ ಪ್ರೋತ್ಸಾಹ ಅಗತ್ಯ: ರವಿಕಿರಣ್ ಮುರ್ಡೇಶ್ವರ

ಗಂಗೊಳ್ಳಿ: ಶಾಲೆಗಳಲ್ಲಿ ಸಾಹಿತ್ಯಗಳಿಗೆ ಸಂಬಂಧಪಟ್ಟ ಶಿಕ್ಷಣ ಹಾಗೂ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಬೆಳೆಸುವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು. ಸಾಹಿತ್ಯಗಳು ಜೀವನವನ್ನು ಸಜ್ಜುಗೊಳಿಸುತ್ತದೆ. ಶಾಲೆಗಳಲ್ಲಿ ಪಠ್ಯ ಪುಸ್ತಕಗಳಿಗೆ ಸೀಮಿತವಾಗಿ ಶಿಕ್ಷಣವನ್ನು ನೀಡಲಾಗುತ್ತಿದ್ದು, ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಕುಂದಾಪುರದ ಪ್ರಸಿದ್ಧ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಹೇಳಿದರು.

ಅವರು ಗಂಗೊಳ್ಳಿಯ ಸ.ವಿ.ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರಗಿದ ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ೪೦ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಂದು ಕ್ರೀಡೆಗಳಲ್ಲಿ ಒಂದು ಸಂದೇಶವಿದೆ. ಕ್ರೀಡೆಗಳನ್ನು ಪ್ರೋತ್ಸಾಹಿಸುವ, ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಕೆಲಸ ಸಂಘ ಸಂಸ್ಥೆಗಳಿಂದ ಆಗಬೇಕು. ಶೈಕ್ಷಣಿಕವಾಗಿ ಸಾಮಾಜಿಕವಾಗಿ ಅನೇಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್‌ನ ಕಾರ್ಯ ಶ್ಲಾಘನೀಯ ಮತ್ತು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲರ್ಸ್ ಕನ್ನಡವಾಹಿನಿಯ ಕಿರುತೆರೆ ನಟಿ ನೀತಾ ಅಶೋಕ್ ಶುಭ ಹಾರೈಸಿದರು. ಇದೇ ಸಂದರ್ಭ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಪದಕ ವಿಜೇತ ಅಶೋಕ ಜಿ.ವಿ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮನಾ ಎಂ.ಪಡಿಯಾರ್ ಉಪಸ್ಥಿತರಿದ್ದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಾಜ ಖಾರ್ವಿ ಜಿಎಫ್‌ಸಿಎಸ್ ವರದಿ ವಾಚಿಸಿದರು. ಶ್ರೀಪಾದ ಶ್ಯಾನುಭಾಗ್, ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್ ಮತ್ತು ಕೆ.ರಾಮನಾಥ ನಾಯಕ್ ಅತಿಥಿಗಳನ್ನು ಹಾಗೂ ಸನ್ಮಾನಿತರನ್ನು ಪರಿಚಯಿಸಿದರು. ವಿಜೇಶ್ ಪಡಿಯಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಮಾಜಿ ಅಧ್ಯಕ್ಷ ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರೂಪಿಸಿದರು. ಎಂ.ವರುಣ್ ಪೈ ವಂದಿಸಿದರು.

Exit mobile version