Kundapra.com ಕುಂದಾಪ್ರ ಡಾಟ್ ಕಾಂ

ಲಾವಣ್ಯ ರಿ. ಬೈಂದೂರು 49ನೇ ವಾರ್ಷಿಕೋತ್ಸವ, ರಂಗಶ್ರೀ – ರಂಗಹಬ್ಬಕ್ಕೆ ಚಾಲನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ರಂಗಭೂಮಿ ಕ್ಷೇತ್ರದಲ್ಲಿ ಲಾವಣ್ಯ ತನ್ನ ಪರಿಪೂರ್ಣ ಸಾಧನೆಯ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಅನೇಕ ಬದಲಾವಣೆಗಳಿಗೆ ಒಗ್ಗಿಕೊಂಡು ಅಭಿನಯ, ನಾಟಕದ ಆಯ್ಕೆ ಜತೆಗೆ ಹೊಸ ಪ್ರಸ್ತುತಿಗಳನ್ನು ರಂಗಭೂಮಿಗೆ ನೀಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದು ನೃಪತುಂಗ ಹೋಟೆಲ್ಸ್ ಪ್ರೈ.ಲಿ. ರಾಯಚೂರು ಮಾಲಕರಾದ ಯು. ರಾಮಚಂದ್ರ ಪ್ರಭು ಹೇಳಿದರು.

ಅವರು ಬುಧವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ನಡೆದ ಲಾವಣ್ಯದ ಸ್ಥಾಪಕಾಧ್ಯಕ್ಷ ದಿ ಉಪ್ಪುಂದ ಶ್ರೀನಿವಾಸ ಪ್ರಭು ಅವರ ಸ್ಮರಣಾರ್ಥ ಲಾವಣ್ಯ ರಿ. ಬೈಂದೂರು ಇದರ 49ನೇ ವಾರ್ಷಿಕೋತ್ಸವದ ಪ್ರಯುಕ್ತ ರಂಗಶ್ರೀ -ರಂಗಹಬ್ಬ -2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಲಾವಣ್ಯ ಸಂಸ್ಥೆ ಬೈಂದೂರಿನ ಸಾಂಸ್ಕೃತಿಕ ಹಿರಿಮೆಯನ್ನು ಜಗದಗಲ ಪಸರಿಸಿದ ಸಾಧನ ಹೊಂದಿದೆ ಹಾಗೂ ಬೈಂದೂರಿನಂತಹ ಗ್ರಾಮೀಣ ಭಾಗದಲ್ಲಿ ಲಾವಣ್ಯ ಸಂಸ್ಥೆ ಕಲಾಭೂಮಿಯನ್ನು ಬೆಳೆಸಿದ ಹಿರಿಮೆ ಬೈಂದೂರಿನ ಹೆಮ್ಮೆಯಾಗಿದೆ ಎಂದು ನೃಪತುಂಗ ಹೋಟೆಲ್ಸ್ ಪ್ರೈ ಲಿ ರಾಯಚೂರು ಮಾಲಕರಾದ ಯು ರಾಮಚಂದ್ರ ಪ್ರಭು ಹೇಳಿದರು.

ಲಾವಣ್ಯ ಸಂಸ್ಥೆಯ ಅಧ್ಯಕ್ಷ ನರಸಿಂಹ ಬಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಖ.ರೈ ಸೇ.ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಉಡುಪಿ ಭಾರತೀಯ ಜೀವ ವಿಮಾ ನಿಗಮದ ವಿಭಾಗೀಯ ಪ್ರಬಂಧಕ ದಿನೇಶ ಪ್ರಭು, ಉದ್ಯಮಿ ಪ್ರಸಾದ ಪ್ರಭು, ಡಾ. ಪ್ರತಿಭಾ ರೈ ಬೈಂದೂರು, ಎಸ್ ಬಿ.ಐ ಲೈಪ್ ಇನ್ಸುರೆನ್ಸ್ ಉಡುಪಿ ಸಹಾಯಕ ಪ್ರಬಂಧಕ ಪ್ರವೀಣ್‌ ಎಸ್‌. ಪ್ರಭು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ, ಬೈಂದೂರು ರಿಧಂ ನೃತ್ಯ ಶಾಲೆಯ ಸ್ಥಾಪಕರಾದ ನಾಗೇಂದ್ರ ಕುಮಾರ್ ಬಂಕೇಶ್ವರ ಅವರನ್ನು ಲಾವಣ್ಯ ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.

ಮಾಜಿ ಅಧ್ಯಕ್ಷ ಉದಯ ಆಚಾರ್ಯ ಹರೆಗೋಡು ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಗಣಪತಿ ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲಾವಣ್ಯದ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ಸಂಸ್ಥೆಯ ಕಾರ್ಯಕ್ರಮದ ವರದಿ ವಾಚಿಸಿದರು. ಓಂ. ಗಣೇಶ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಹದಾರ್‌ ವಂದಿಸಿದರು.

Exit mobile version