Site icon Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯ ಬಜೆಟ್ – ಕರಾವಳಿಗೆ ದಿವಾಳಿ ಸರಕಾರದ ಶೂನ್ಯ ಭಾಗ್ಯ: ಗಜೇಂದ್ರ ಎಸ್. ಬೇಲೆಮನೆ ಟೀಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಂಡಿಸಿದ 17ನೇ ರಾಜ್ಯ ಬಜೆಟ್ ಕರಾವಳಿ ಭಾಗದ ಜನರಲ್ಲಿ ಭಾರೀ ನಿರಾಸೆ ಮತ್ತು ಆಕ್ರೋಶವನ್ನು ಉಂಟುಮಾಡಿದೆ ಎಂದು ಬೈಂದೂರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಜೇಂದ್ರ ಎಸ್.‌ ಬೇಲೆಮನೆ ಟೀಕಿಸಿದ್ದಾರೆ.

ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕರಾವಳಿ ಭಾಗ ಬಜೆಟ್‌ನಲ್ಲಿ ಮತ್ತೆ ನಿರ್ಲಕ್ಷ್ಯಕ್ಕೆ ಗುರಿಯಾಗಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಕರಾವಳಿ ಭಾಗದ ಜನರು ರಾಜ್ಯಕ್ಕೆ ಅಪಾರ ತೆರಿಗೆ ಕೊಡುಗೆ ನೀಡುತ್ತಾರೆ. ಶಿಕ್ಷಣ, ಬ್ಯಾಂಕಿಂಗ್, ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಈ ಭಾಗವು ಕರ್ನಾಟಕದ ಹೆಮ್ಮೆಯಾಗಿದೆ. ಆದರೆ ಸರ್ಕಾರ ಬಜೆಟ್ ಮಂಡಿಸುವಾಗ ಮಾತ್ರ ಈ ಭಾಗವನ್ನು ಸಂಪೂರ್ಣವಾಗಿ ಮರೆತುಬಿಡುತ್ತಿರುವುದು ದುಃಖಕರ ಸಂಗತಿ ಎಂದರು.

ಮೀನುಗಾರರ ಬದುಕು ಸುಧಾರಣೆ, ಕಡಲ್ಕೊರೆತ ತಡೆ ಯೋಜನೆಗಳು, ಕರಾವಳಿ ರಕ್ಷಣಾ ಕಾಮಗಾರಿಗಳು, ಪ್ರವಾಸೋದ್ಯಮ ಅಭಿವೃದ್ಧಿ, ಬಂದರುಗಳ ವಿಸ್ತರಣೆ, ಯುವಕರಿಗೆ ಉದ್ಯೋಗ ಸೃಷ್ಟಿ – ಇಂತಹ ಪ್ರಮುಖ ವಿಷಯಗಳಿಗೆ ಈ ಬಜೆಟ್‌ನಲ್ಲಿ ಯಾವುದೇ ಸ್ಪಷ್ಟ ಯೋಜನೆಗಳಿಲ್ಲ. ಇದು ಕರಾವಳಿ ಭಾಗದ ಜನರ ಆಶಾಭಾವನೆಗಳಿಗೆ ದೊಡ್ಡ ಹೊಡೆತವಾಗಿದೆ.

ಮೀನುಗಾರರು, ಕರಾವಳಿ ರಕ್ಷಣಾ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿ – ಯಾವುದಕ್ಕೂ ಸ್ಪಷ್ಟ ಯೋಜನೆ ಇಲ್ಲ. ಆದರೆ ಓಲೈಕೆ ರಾಜಕೀಯಕ್ಕೆ ಕೋಟಿ ಕೋಟಿ ಅನುದಾನ! ಇದು ಅಭಿವೃದ್ಧಿಯ ಬಜೆಟ್ ಅಲ್ಲ, ಕರಾವಳಿ ಭಾಗಕ್ಕೆ ಮಾಡಿದ ಅನ್ಯಾಯ ಎಂದು ಬೈಂದೂರು ಬಿಜೆಪಿ ಯುವ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

ಇನ್ನೂ ಈ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಹೆಸರಿನಲ್ಲಿ ಅನೇಕ ಯೋಜನೆಗಳಿಗೆ ದೊಡ್ಡ ಮೊತ್ತದ ಅನುದಾನ ಘೋಷಣೆ ಮಾಡಲಾಗಿದೆ.

ಒಂದು ಭಾಗದ ಜನರನ್ನು ತೃಪ್ತಿ ಪಡಿಸಲು ಮತ್ತೊಂದು ಭಾಗದ ಜನರನ್ನು ಸಂಪೂರ್ಣವಾಗಿ ಕಡೆಗಣಿಸುವುದು ಯಾವ ರೀತಿಯ ಸಮಾನತೆಯ ಆಡಳಿತ ಎಂಬ ಪ್ರಶ್ನೆಯನ್ನು ಬೈಂದೂರು ಬಿಜೆಪಿ ಯುವ ಮೋರ್ಚಾ ಸಾರ್ವಜನಿಕರ ಮುಂದೆ ಹಾಗೂ ಸರ್ಕಾರದ ಮುಂದೆ ಇಡುತ್ತಿದೆ ಎಂದರು.

“ಕರಾವಳಿ ಭಾಗದ ಜನರು ತೆರಿಗೆ ಕಟ್ಟುವಾಗ ಕರ್ನಾಟಕದವರು
ಆದರೆ ಬಜೆಟ್ ಹಂಚುವಾಗ ಮಾತ್ರ ಮರೆತುಹೋಗುವವರೇ?” ಎಂಬ ಪ್ರಶ್ನೆ ಇಂದು ಕರಾವಳಿಯ ಪ್ರತಿಯೊಬ್ಬರ ಮನದಲ್ಲಿ ಮೂಡುತ್ತಿದೆ.

ಬೈಂದೂರು ಬಿಜೆಪಿ ಯುವ ಮೋರ್ಚಾ ಈ ಬಜೆಟ್‌ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕರಾವಳಿ ಭಾಗದ ಅಭಿವೃದ್ಧಿಯನ್ನು ಕಡೆಗಣಿಸುವಂತಹ ಯಾವುದೇ ನೀತಿಯನ್ನು ಜನರು ಸಹಿಸುವುದಿಲ್ಲ ಹಾಗೂ ಅಭಿವೃದ್ಧಿ ಎಲ್ಲರಿಗೂ ಸಮಾನವಾಗಿ ಸಿಗಬೇಕು ಅಷ್ಟೇ ಎಂಬ ಮಾತು ಹೇಳುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

Exit mobile version