ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಬಿಜೂರು ಗ್ರಾಮದ ಹರಕೇರಿಯಲ್ಲಿ ನಡೆಸಿದ ದಾಳಿಯಲ್ಲಿ ಸರ್ಕಾರದ ‘ಅನ್ನಭಾಗ್ಯ’ ಯೋಜನೆಗೆ ಸೇರಿದ 400 ಕೆಜಿ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಾಹಿತಿ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯ ಸಮಯದಲ್ಲಿ, ಆರೋಪಿಗಳಾದ ಅಬ್ದುಲ್ ಮಜೀದ್ ಮತ್ತು ಆಯಿಷಾ ವಾಸಿಂ ಎಂಬುವವರು ಮೂರು ಚಕ್ರದ ಗೂಡ್ಸ್ ವಾಹನದಲ್ಲಿ ಅಕ್ಕಿಯನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.
ಆಹಾರ ನಿರೀಕ್ಷಕ ವಿನಯ್ ಕುಮಾರ್ ಅವರು ನೀಡಿದ ದೂರಿನಂತೆ, ಬಿಜೂರಿನಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಸರ್ಕಾರದ ಯೋಜನೆಯಡಿ ಉಚಿತವಾಗಿ ವಿತರಿಸಬೇಕಾದ ಈ ಅಕ್ಕಿಯನ್ನು ಅಪರಿಚಿತ ಮೂಲಗಳಿಂದ ಪಡೆದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಡಲಾಗಿತ್ತು ಎಂದು ಆರೋಪಿಸಲಾಗಿದೆ.
ಒಟ್ಟು 9,200 ರೂ. ಮೌಲ್ಯದ 15 ಚೀಲಗಳಲ್ಲಿದ್ದ 400 ಕೆಜಿ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಅಕ್ಕಿಯನ್ನು ತಲ್ಲೂರು ಟಿಎಎಂಪಿಎಂಸಿ ಗೋದಾಮಿನಲ್ಲಿ ಇರಿಸಲಾಗಿದೆ. ಆಹಾರ ನಿರೀಕ್ಷಕರ ದೂರಿನ ಆಧಾರದ ಮೇಲೆ ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

