ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆಣ್ಣು ಸಮಾಜದ ತಾರತಮ್ಯ ಧೋರಣೆಯಿಂದ ಅನುಭವಿಸುವ ಕಷ್ಟಗಳ ಕುರಿತು ಮಾತನಾಡುತ್ತಾ ಕಲಾಕ್ಷೇತ್ರದಲ್ಲೂ ಸಾಹಿತ್ಯ ಕ್ಷೇತ್ರದಲ್ಲೂ ಹೆಣ್ಣು ಮಕ್ಕಳು ತಮಗೆ ಸಹಜವಾಗಿ ಅನ್ನಿಸಿದ್ದನ್ನು ಹೇಳಲು ಭಯಪಡುವಂಥ ಪರಿಸ್ಥಿತಿಯಿದೆ. ಆದರೆ ಕೊಲ್ಲಿರಾಷ್ಟ್ರಗಳನ್ನು ಹೆಣ್ಣನ್ನು ಒಂದು ವಸ್ತುವಿನಂತೆಯೋ ಪ್ರಾಣಿಯಂತೆಯೋ ಕಾಣುವ ತಾತ್ಸಾರ ಭಾವದಿಂದ ನಾವು ಭಾರತೀಯರು ಸಂಪೂರ್ಣ ಮುಕ್ತರಾಗಿದ್ದೇವೆ. ಆ ಮಟ್ಟಿಗೆ ನಾವು ಅದೃಷ್ಟವಂತರು ಎಂದು ಖ್ಯಾತ ರಂಗಭೂಮಿ ಕಲಾವಿದೆ, ಚಿತ್ರನಟಿ-ಲೇಖಕಿ ಪೂರ್ಣಿಮಾ ಸುರೇಶ್ ಹೇಳಿದರು.
ಅವರು ಕುಂದಾಪುರ ಜನಪ್ರತಿನಿಧಿ ಸಂಸ್ಥೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ’ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆʼಯ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಲೇಖಕಿ ಪಾರ್ವತಿ ಜಿ. ಐತಾಳ್, ಮಹಿಳೆಯರನ್ನು ಮಹಿಳಾ ದಿನಾಚರಣೆಯಂದು ಹಾಡಿಹೊಗಳುವುದಕ್ಕಿಂತಲೂ ಅವರು ಅಂತರಂಗದಲ್ಲಿ ಅನುಭವಿಸುವ ನೋವುಗಳೇನು ಮತ್ತು ಆ ನೋವಿಗೆ ಕಾರಣಗಳೇನು ಎಂಬುದನ್ನು ತಿಳಿದುಕೊಂಡು ಅವರ ಕಷ್ಟಗಳನ್ನು ಸಮಾನವಾಗಿ ಹಂಚಿಕೊಳ್ಳುವ ಕೆಲಸ ಆಗಬೇಕಾಗಿದೆ .ಇತಿಹಾಸ-ಪರಂಪರೆ-ಪದ್ಧತಿಗಳನ್ನು ಅನುಸರಿಸುವ ನೆಪದಲ್ಲಿ ಹೆಣ್ಣಿನ ಮೇಲೆ ಮನೆಯೊಳಗಿನ ಎಲ್ಲರ ಚಾಕರಿ ಮಾಡಿಸುವುದನ್ನು ಇಂದಿನ ಬದಲಾದ ಯುಗದಲ್ಲಿ ನಿಲ್ಲಿಸಬೇಕಾಗಿದೆ. ಮಾನವೀಯ ನೆಲೆಯಿಂದ ಅವಳ ವ್ಯಕ್ತಿತ್ವವನ್ನು ಗುರುತಿಸಿ ಅವಳ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳಬೇಕಾಗಿದೆ. ಭಾರತೀಯ ಭವ್ಯ ಸಂಸ್ಕೃತಿಯು ಅರ್ಧನಾರೀಶ್ವರ ತತ್ವದ ಮೇಲೆ ನಿಂತಿದೆ. ಅಂದ ಮೇಲೆ ಹೆಣ್ಣು-ಗಂಡು ಎಲ್ಲಾ ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳುವುದೇ ನ್ಯಾಯ. ಈ ಬಗ್ಗೆ ಅರಿವು ಮೂಡಿಸುವುದೇ ನಮ್ಮ ಧ್ಯೇಯವಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ ಲೇಖಕಿ- ಕಲಾವಿದೆ ಸುಪ್ರಸನ್ನ ನಕ್ಕತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಕ.ಸಾ.ಪ.ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿತ್ರಕಲಾವಿದೆ ನೇಹಾ ಗಂಗೊಳ್ಳಿ ಅವರನ್ನು ಸನ್ಮಾನಿಸಲಾಯಿತು.
ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆಯ ಕಾರ್ಯದರ್ಶಿ ಲೇಖಕಿ ಪೂರ್ಣಿಮಾ ಕಮಲಶಿಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುಮತಿ ಶೆಣೈ ಅತಿಥಿಗಳ ಪರಿಚಯಿಸಿದರು. ರಾಧಾಕಾರಂತ, ಜಯಲಕ್ಷ್ಮಿ ಕಾರಂತರು ಆರಂಭ ಗೀತೆಯನ್ನು ಹಾಡಿದರು. ರೇಡಿಯೋ ಕುಂದಾಪುದ ಜ್ಯೋತಿ ಸಾಲಿಗ್ರಾಮ ಸನ್ಮಾನ ಪತ್ರ ವಾಚಿಸಿದರು. ಸುಪ್ರೀತಾ ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಜತೆ ಕಾರ್ಯದರ್ಶಿ ಜೆಸ್ಸಿ ಎಲಿಜಬೆತ್ ವಂದಿಸಿದರು.