ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಂಡಾರ್ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿಗಳ ಕುಸ್ತಿ ಸಂಘದ ಪ್ರಾಯೋಜಕತ್ವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಅಂತರ್ ಕಾಲೇಜು ಕಬ್ಬಡಿ (ಉಡುಪಿ ವಲಯ) ಪಂದ್ಯಾವಳಿಯ ಅಂತಿಮ ಪಂದ್ಯದ ಹಣಾಹಣಿಯಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಚಾಂಪಿಯನ್ ಪ್ರಶಸ್ತಿ ಪಡೆಯಿತು.
ರನ್ನರ್ ಆಫ್ ಪ್ರಶಸ್ತಿಯನ್ನು ಜಿ.ಎಫ್.ಜಿ.ಸಿ ತೆಂಕನಿಡಿಯೂರು ಪಡೆಯಿತು. ತೃತೀಯ ಸ್ಥಾನವನ್ನು ಮಹಾವೀರ ಕಾಲೇಜು ಮೂಡುಬಿದರೆ ಪಡೆಯಿತು. ಚತುರ್ಥ ಸ್ಥಾನವನ್ನು ಆಥಿತೇಯ ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ಪಡೆಯಿತು.

ಅತ್ತ್ಯುತ್ತಮ ರೈಡರ್ ಪ್ರಶಸ್ತಿಯನ್ನು ಆತಿಥೇಯ ಭಂಡಾರ್ಕಾರ್ಸ್ ಕಾಲೇಜಿನ ನಿತಿನ್, ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಜಿ.ಎಫ್.ಜಿ.ಸಿ ತೆಂಕನಿಡಿಯೂರು ಇಲ್ಲಿನ ಅನಿಶ್, ಮತ್ತು ಅತ್ಯುತ್ತಮ ಅಲ್ ರೌಂಡರ್ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ವರುಣ್ ಪಡೆದರು. ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ತಂಡದ ಮಾಜಿ ನಾಯಕ ರಾಜೇಂದ್ರ ಸುವರ್ಣ ಮಾತನಾಡಿ ಗ್ರಾಮೀಣ ಪ್ರತಿಭೆಗಳು ಕಬಡ್ಡಿ ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ. ಉತ್ತಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರಾಚಾರಿ ವಹಿಸಿದ್ದರು.
ವೇದಿಕೆಯಲ್ಲಿ ಗುರು ಹನುಮಾನ್ ಕೆಟರರ್ಸ ಇದರ ಮಾಲಿಕ ಹಳ್ತೂರಿನ ಭರತ್ ಕುಮಾರ್ ಶೆಟ್ಟಿ, ಹಾಸನದ ಶ್ರೀರಾಮ ಟೈಲ್ಸ್ ಮತ್ತು ಸ್ಯಾನಿಟರಿ ಇದರ ಮಾಲಿಕ ಪ್ರತೀಶ್ ಶೆಟ್ಟಿ, ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿಜಯ್ ಶೆಟ್ಟಿ, ಸಿ.ಐ ಎಸ್.ಎಫ್ ಇದರ ನಿವೃತ್ತ ಇನ್ಸ್ಪೆಕ್ಟರ್ ನಾಗರಾಜ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಮ್.ಗೊಂಡ, ಕಾಲೇಜಿನ ಅಂತರಿಕ ಗುಣಮಟ್ಟ ಮತ್ತು ಭರವಸೆ ಕೋಶದ ಸಂಯೋಜಕರಾದ ಪ್ರೊ. ಸತ್ಯನಾರಾಯಣ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶಂಕರನಾರಾಯಣ ಉಪಸ್ಥಿತರಿದ್ದರು.
ಉಪನ್ಯಾಸಕಿ ಸ್ನೇಹ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪ್ರಶಾಂತ್ ಹೆಗ್ಡೆ ಸ್ವಾಗತಿಸಿದರು.