ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಬೆಳದಿಂಗಳ ಚಿಂತನ ಉಪನ್ಯಾಸ ಮಾಲಿಕೆ-2ರಲ್ಲಿ “ಬದಲಾದ ಶಿಕ್ಷಣ ವ್ಯವಸ್ಥೆ: ಶಿಕ್ಷಕರಿಗಿರುವ ಸವಾಲುಗಳು” ಎನ್ನುವ ವಿಷಯದ ಕುರಿತು ಸಿಬ್ಬಂದಿ ಪುನಶ್ಚೇತನ ಕಾರ್ಯಕ್ರಮ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.

ಕೋಡಿಯ ಹಾಜಿ ಕೆ. ಮೊಹಿದಿನ್ ಬ್ಯಾರಿ ಪ್ರೌಢ ಶಾಲೆ ಇಲ್ಲಿನ ಮುಖ್ಯ ಶಿಕ್ಷಕರಾದ ಡಾ| ಜಯಶೀಲ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಮಕ್ಕಳ ವರ್ತನೆ ಪರಿವರ್ತನೆ ಶಿಕ್ಷಣದ ಪ್ರಮುಖ ಗುರಿಯಾಗಬೇಕು. ವಿದ್ಯಾರ್ಥಿಗಳಲ್ಲಿ ಜ್ಞಾನವರ್ಧನೆಯ ಜೊತೆಗೆ ಕೌಶಲ್ಯ ಮತ್ತು ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು. ಇದೇ ಸಂದರ್ಭ ಅವರು ರಾಷ್ಟ್ರೀಯ ಶಿಕ್ಷಣ ನೀತಿ 2020 ಮಾತೃಭಾಷೆಗೆ ನೀಡಿದ ಮಹತ್ವ ಹಾಗೂ ಈ ಶಿಕ್ಷಣ ನೀತಿಯ ಅನನ್ಯತೆಗಳ ಕುರಿತು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಉಪ-ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಸ್ತಾವಿಸಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರವೀಣಾ ಎಮ್. ಪೂಜಾರಿ ಅತಿಥಿಗಳನ್ನು ಪರಿಚಯಿಸಿ, ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನಿರ್ಮಲ ಬಿಲ್ಲವ ಪ್ರಾರ್ಥಿಸಿದರು. ರಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ರೇಷ್ಮಾ ಶೆಟ್ಟಿ ವಂದಿಸಿದರು.