Site icon Kundapra.com ಕುಂದಾಪ್ರ ಡಾಟ್ ಕಾಂ

ಕತಾರ್‌ನಲ್ಲಿ ಭಾರತೀಯರು ಸುರಕ್ಷಿತ – ಕತಾರ್ ಸರ್ಕಾರದಿಂದ ಸಂಪೂರ್ಣ ಕಾಳಜಿ, ಆತಂಕ ಬೇಡ: ಸುಬ್ರಹ್ಮಣ್ಯ ಹೆಬ್ಬಾಗಿಲು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕತಾರ್
: ಫೆಬ್ರವರಿ 28, 2026ರ ಮಧ್ಯಾಹ್ನದಿಂದ ಅಮೆರಿಕ ಹಾಗೂ ಇಸ್ರೇಲ್ ದೇಶಗಳು ಇರಾನ್ ದೇಶದ ಮೇಲೆ ಯುದ್ಧ ಪ್ರಾರಂಭಿಸಿದ ಪರಿಣಾಮವಾಗಿ ಇರಾನ್ ದೇಶವು ಕೊಲ್ಲಿದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ಪ್ರತಿ ದಾಳಿ ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇಲ್ಲಿ ನೆಲೆಸಿರುವ ಭಾರತೀಯರಲ್ಲಿ, ಕನ್ನಡಿಗರಾಗಲಿ ಹಾಗೂ ಅವರ ಕುಟುಂಬದ ಸದಸ್ಯರು ಭಾರತದಲ್ಲಿರುವ ಸಂಬಂಧಿಕರು ಸ್ನೇಹಿತರು ಯಾವುದೇ ರೀತಿಯ ಆತಂಕಕ್ಕೊಳಗಾಗದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಸ್ಥಿತಿಯು ಸಾಮಾನ್ಯ ರೀತಿ ಬರುವವರೆಗೆ ತಾಳ್ಮೆಯಿಂದ ಇರಲು ಕೋರಲಾಗುತ್ತಿದೆ ಎಂದು ಕತಾರ್‌ನ ಐ.ಸಿ.ಬಿ.ಎಫ್. ಮಾಜಿ ಜಂಟಿ ಕಾರ್ಯದರ್ಶಿ, ಭಾರತೀಯ ಸ್ಪೋರ್ಟ್ಸ್ ಸೆಂಟರ್ ಸಲಹಾ ಸಮಿತಿ ಸದಸ್ಯ ಸುಬ್ರಹ್ಮಣ್ಯ ಹೆಬ್ಬಾಗಿಲು ತಿಳಿಸಿದ್ದಾರೆ.

ಕತಾರಿನ ದೋಹಾದಲ್ಲಿರುವ ಜನಸಾಮಾನ್ಯರಿಗೆ, ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಕತಾರ್ ದೇಶದ ಆಂತರಿಕ ಮಂತ್ರಾಲಯಗಳು ಸೂಚನೆಗಳನ್ನು ನೀಡುತ್ತಿವೆ. 01ಮಾರ್ಚ್ 2026ರಿಂದ ವೈದ್ಯಕೀಯ ಹಾಗೂ ನಾಗರೀಕ ಸರಬರಾಜು ಸೇವೆಗಳನ್ನು ಹೊರತುಪಡಿಸಿ ಇನ್ನು ಯಾವುದೇ ಮತ್ತಿತರ ಸಂಸ್ಥೆಗಳು ಹಾಗೂ ಶಾಲೆಗಳು ಮುಖಾಮುಖಿ ಚಟುವಟಿಕೆಗಳನ್ನು ನಡೆಸುತ್ತಿಲ್ಲ.

ಕರೋನ ಮಹಾಮಾರಿಯು ತಾಂಡವವಾಡುತ್ತಿದ್ದ ಕಾಲಾದಂತೆ, ಅಂತಹುದೇ ವಾತಾವರಣವು ಮರು ಸೃಷ್ಟಿಯಾಗಿ ಶಾಲೆಗಳು ಹಾಗೂ ಸಂಸ್ಥೆಗಳ ಕೆಲಸಗಳು ಮನೆಯಿಂದಲೇ ನಡೆಯುತ್ತಿವೆ. ಸ್ಥಳೀಯ ಮಂತ್ರಾಲಯಗಳು ದಿನನಿತ್ಯ ಸೂಚನೆಗಳನ್ನು ಎಲ್ಲರ ಜಂಗಮವಾಣಿಗೆ ಕಳಿಸುತ್ತಿರುವುದು ಎಲ್ಲರ ಸುರಕ್ಷತೆಹೆ ಸಹಾಯಕಾರಿಯಾಗಿದೆ. ಮೂಲಭೂತ ಸೌಕರ್ಯಗಳು, ವಿದ್ಯುತ್ ಸರಬರಾಜು, ನೀರಿನ ಸರಬರಾಜು, ಅನ್ನಹಾರಗಳು ,ತರಕಾರಿಗಳು ದವಸ ಧಾನ್ಯ ಹಾಗೂ ಮತ್ತಿತರ ದಿನನಿತ್ಯದ ಬಳಕೆಗೆ ಬೇಕಾಗುವ ವಸ್ತುಗಳು ಲಭ್ಯವಿರುತ್ತದೆ. ಹಾಲು-ಮೊಸರು ಎಂದಿನಂತೆ ಎಲ್ಲ ಕಡೆಯೂ ದೊರೆಯುತ್ತಿದೆ. ಯಾವುದೇ ಪದಾರ್ಥಗಳ ಅಭಾವ ಇದುವರೆಗೂ ಕಂಡುಬಂದಿಲ್ಲ.

ಕತಾರಿನಲ್ಲಿ ನೆಲೆಸಿರುವ ಭಾರತೀಯರಲ್ಲಿ, ಕನ್ನಡಿಗರಾಗಲಿ ಹಾಗೂ ಅವರ ಕುಟುಂಬದ ಸದಸ್ಯರು ಭಾರತದಲ್ಲಿರುವ ಸಂಬಂಧಿಕರು ಸ್ನೇಹಿತರು ಇವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಯಾವುದೇ ರೀತಿಯ ಆತಂಕಕ್ಕೊಳಗಾಗದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಸ್ಥಿತಿಯು ಸಾಮಾನ್ಯ ರೀತಿ ಬರುವವರೆಗೆ ತಾಳ್ಮೆಯಿಂದ  ಇರಲು ಕೋರಲಾಗುತ್ತಿದೆ.

ಭಯ, ಉದ್ವೇಗ, ಆತಂಕಕ್ಕೆ ಮನಸ್ಸನ್ನು ಒಳಪಡಿಸದೆ ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಬೇಕಾಗಿ ವಿನಯಪೂರ್ವಕ ವಿನಂತಿ. ಯಾವುದೇ ರೀತಿಯಲ್ಲಿ ಅನವಶ್ಯಕವಾಗಿ ಹೊರಗಡೆ ನಡೆದಾಡುವುದು, ತಮ್ಮ ಕಟ್ಟಡಗಳ ಹತ್ತಿರದಲ್ಲಿ ಕ್ಷಿಪಣಿಗಳ ತುಣುಕುಗಳು ಬಿದ್ದಿರುವುದರ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಳುಹಿಸುವುದನ್ನು ಮಾಡಬಾರದೆಂದು ಕೋರಿಕೆ. ಸ್ಥಳೀಯ ಮಂತ್ರಾಲಯಗಳಿಗೆ ತಿಳಿದು ಬಂದಲ್ಲಿ ಸೂಕ್ತ ಕ್ರಮವನ್ನು ಜರಗಿಸಲಾಗುತ್ತದೆ.

ಆರೋಗ್ಯದ ಕಾರಣ ಅಥವಾ ಇನ್ನಿತರ ವಿಶೇಷ ಕಾರಣಾಂತರಗಳಿಂದ ಮಾತೃಭೂಮಿಗೆ ತೆರಳಲು ಇಚ್ಚಿಸುವವರು ಭಾರತೀಯ ದೂತವಾಸದ ಪ್ರತಿನಿಧಿಗಳನ್ನು ಸಂಪರ್ಕಿಸಬೇಕಾಗಿ ವಿನಂತಿ. ಇಂತಹವರಿಗೆ ಸೌದಿ ಅರೇಬಿಯಾದ ರಿಯಾದ್ ಅಥವ ಜೆಡ್ಡಾ ನಗರಗಳಿಗೆ ನೆಲಮಾರ್ಗದಲ್ಲಿ ಕಳುಹಿಸಿ ಅಲ್ಲಿಂದ ವಾಯುಮಾರ್ಗದಲ್ಲಿ ಭಾರತಕ್ಕೆ ಹಿಂದಿರುಗಲು ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದೆ.

ಕೆಳಗೆ ಪಟ್ಟಿ ಮಾಡಿರುವ ಸ್ಥಳೀಯ ದೂರವಾಣಿ ಸಂಖ್ಯೆಗಳನ್ನು ಆಯಾ ಪ್ರತಿನಿಧಿಗಳಿಗೆ ಸಂಪರ್ಕಿಸಲು ಉಪಯೋಗಿಸಬಹುದು.

Contact Information
Calling Number
: +974 55641025
WhatsApp: +974 55641025

ಇಂತಹ ಸತ್ವ ಪರೀಕ್ಷೆಯ ಸಮಯದಲ್ಲಿ ತಮ್ಮೆಲ್ಲರ ಸಹಾಯ, ಸಹಕಾರ ಹಾಗೂ ನಿರ್ಭಯ ಚಿತ್ತ ಅತ್ಯವಶ್ಯಕ ಒಬ್ಬರಿಗೊಬ್ಬರು ಭುಜಕೊಟ್ಟು ನಿಲ್ಲಲು ಒಂದು ಸದಾವಕಾಶ. ಆತ್ಮಸ್ಥೈರ್ಯವನ್ನು ಎತ್ತು ಹಿಡಿಯಲು ಒಂದು ಸುಸಂದರ್ಭ ಎಂದು ಅವರು ತಿಳಿಸಿದ್ದಾರೆ.

Exit mobile version