ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಿರ್ಮಾಣ ಹಂತದ ಮನೆಯೊಂದರ ಗಾರೆ ಕೆಲಸದ ಮಾಡುತ್ತಿದ್ದ ವೇಳೆ ಕಬ್ಬಿಣದ ಏಣಿಯನ್ನು ಮತ್ತೊಂದೆಡೆ ಸ್ಥಳಾಂತರಿಸುವಾಗ ಮನೆ ಹಿಂಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಏಣಿ ಸ್ಪರ್ಶವಾದ ಪರಿಣಾಮ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಕುಂದಾಪುರದ ಕಡ್ಡಿಮನೆ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಕುಂದಾಪುರ ತಾಲೂಕಿನ ಮೂಡ್ಲಕಟ್ಟೆ ಸಮೀಪದ ಕಂದಾವರ ಸಾಂತಾವರ ನಿವಾಸಿ ಶಿವರಾಜ್ (35) ಮೃತರು ಎಂದು ಗುರುತಿಸಲಾಗಿದೆ. ಅವರು ಕಳೆದ 15 ವರ್ಷಗಳಿಂದ ಗಾರೆ ವೃತ್ತಿಮಾಡಿಕೊಂಡಿದ್ದರು.
ಕುಂದಾಪುರ ಹೊರವಲಯದ ಕಡ್ಡಿಮನೆ ರಸ್ತೆಯ ಕೊನೆಯಲ್ಲಿ ಪ್ರವೀಣ್ ಖಾರ್ವಿ ಎನ್ನುವರ ನಿರ್ಮಾಣ ಹಂತದಲ್ಲಿರುವ ಮನೆಯ ಗಾರೆ ಕೆಲಸಕ್ಕೆ ಸೋಮವಾರ ಶಿವರಾಜ್ ಹಾಗೂ ಇತರರು ಬಂದಿದ್ದು ತನ್ನ ಜೊತೆ ಕೆಲಸ ಮಾಡುವ ಇನ್ನಿಬ್ಬರು ಕೆಲಸಗಾರರೊಂದಿಗೆ ಕಬ್ಬಿಣದ ಏಣಿಯನ್ನು ಎತ್ತಿ ಬೇರೆ ಕಡೆಗೆ ಹೊತ್ತೊಯ್ಯು ವಾಗ ಆಕಸ್ಮಿಕವಾಗಿ ಏಣಿಯು ಆಯತಪ್ಪಿ ಅಲ್ಲಿಯೇ ಹಾದು ಹೋಗಿರುವ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಶಾಕ್ ತಗುಲಿದ್ದರಿಂದ ಶಿವರಾಜ್ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿ ತಾದರೂ ಅಷ್ಟರಲ್ಲಾಗಲೇ ಶಿವರಾಜ್ ಮೃತಪಟ್ಟಿದ್ದರು. ಘಟನೆಯಲ್ಲಿ ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಮೃತ ಶಿವರಾಜ್ ಅವಿವಾಹಿತರಾಗಿದ್ದರು.
ಕಡುಬಡತನದಿಂದ ಇರುವ ಕುಟುಂಬಕ್ಕೆ ಇದ್ದ ಅಧಾರ ಸ್ತಂಭವಾಗಿದ್ದ ಶಿವರಾಜ್ ಆಗಲಿಕೆ ಮತ್ತಷ್ಟು ನೋವುಂಟು ಮಾಡಿದೆ. ತಂದೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದು, ಅವರನ್ನು ಚಿಕಿತ್ಸೆಗೆ ಸೋಮವಾರ ಕರೆದುಕೊಂಡು ಹೋಗಬೇಕಾಗಿದ್ದ ಶಿವರಾಜ್ ಹಣದ ತೊಂದರೆಯಿಂದಾಗಿ ನಾಳೆ ಹೋಗುವ ಎಂದು ಕೆಲಸಕ್ಕೆ ಹೋಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕುಂದಾಪುರ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಪುಷ್ಪಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಮೃತರ ಸಹೋದರ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

