Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ರಸ್ತೆ ಅಪಘಾತದಲ್ಲಿ ಸಮಾಜ ಸೇವಕ ಶ್ರೀನಿವಾಸ ಗಾಣಿಗ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ತಲ್ಲೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ಮಂಗಳವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ, ಕನ್ಯಾನದ ನಮ್ಮ ಭೂಮಿಯ ಸಕ್ರಿಯ ಕಾರ್ಯಕರ್ತ, ಗಾಣಿಗ ಸಮುದಾಯದ ಮುಖಂಡ ಶ್ರೀನಿವಾಸ ಗಾಣಿಗ (68) ಅವರು ಗಂಭೀರ ಗಾಯಗೊಂಡು ನಿಧನರಾಗಿದ್ದಾರೆ.

ಮಂಗಳವಾರ ರಾತ್ರಿ ಕಾರ್ಯಕ್ರಮವೊಂದನ್ನು ಮುಗಿಸಿ ಕುಂದಾಪುರದಿಂದ ತಮ್ಮ ಬೈಕಿನಲ್ಲಿ ಕಟ್ ಬೆಲ್ತೂರು ಕಡೆಗೆ ತೆರಳುತ್ತಿದ್ದರು. ರಾತ್ರಿ 8 ಗಂಟೆಯ ಸುಮಾರಿಗೆ ತಲ್ಲೂರು ಸಮೀಪದ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ರಾಂಗ್ ಸೈಡ್ʼನಲ್ಲಿ ಅತೀ ವೇಗವಾಗಿ ಬಂದ ಬೈಕ್ ಇವರ ಬೈಕಿನ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಶ್ರೀನಿವಾಸ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಸ್ಥಳೀಯರು ತಕ್ಷಣವೇ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ನಮ್ಮ ಭೂಮಿ ಸಂಸ್ಥೆಯಲ್ಲಿ 15 ವರ್ಷಕ್ಕೂ ಹೆಚ್ಚುಕಾಲ ಸಕ್ರಿಯವಾಗಿದ್ದ ಅವರು ಪಂಚಾಯತ್ ರಾಜ್ ಹತ್ಕೋತ್ತಾಯ ಆಂದೋಲನದಲ್ಲಿ ಸಕ್ರಿಯರಾಗಿದ್ದರು. ಪಂಚಾಯತ್ ರಾಜ್ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ತೊಡಗಿಸಿಕೊಂಡಿದ್ದರು.

ಸಮುದಾಯದ ಅಭಿವೃದ್ದಿಯಲ್ಲಿಯೂ ಕೈಜೋಡಿಸಿ ಕುಂದಾಪುರ ತಾಲೂಕು ಗಾಣಿಗ ಸಮಾಜದ ಮಾಜಿ ಅಧ್ಯಕ್ಷರಾಗಿ ಸಮುದಾಯದ ಏಳಿಗೆಗೆ ಶ್ರಮಿಸಿದ್ದರು.

ಮೃತರ ಪತ್ನಿ, ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಲಲಿತಾ ಗಾಣಿಗ ಹಾಗೂ ಇಬ್ಬರು ಪುತ್ರರನ್ನು ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version