Site icon Kundapra.com ಕುಂದಾಪ್ರ ಡಾಟ್ ಕಾಂ

ಡಿ.ಸಿ. ಮನ್ನಾ ಜಾಗ ಅರ್ಹರಿಗೆ ಮಂಜೂರು ಮಾಡಲು ಶಾಸಕ ಗಂಟಿಹೊಳೆ ಸದನದಲ್ಲಿ ಒತ್ತಾಯ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನನದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಡಿ.ಸಿ ಮನ್ನಾ ಭೂ ಮಂಜೂರು ಮಾಡಲು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ  ಸಮುದಾಯದವರು ಆಗ್ರಹ ಪಡಿಸುತ್ತಿರುವ ವಿಚಾರ ಸರಕಾರದ ಗಮನದಲ್ಲಿದೆಯೇ? ಇದ್ದಲ್ಲಿ ಈ ಬಗ್ಗೆ ಈವರೆಗೆ ಕೈಗೊಂಡ ಕ್ರಮವೇನು ಹಾಗೂ ಭೂಮಿಗಳನ್ನು ಅರ್ಹ ಭೂ ರಹಿತರಿಗೆ ನೀಡಲು ಸರಕಾರ ಕೈಗೊಂಡ ಕ್ರಮಗಳ ಕುರಿತು ಪ್ರಶ್ನೆ ಕೇಳಿದ್ದಾರೆ.

ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ  ಕಂದಾಯ ಸಚಿವರಾದ ಕೃಷ್ಣ ಬೈರೇ ಗೌಡ ಅವರು  ಕರ್ನಾಟಕ ಭೂ ಮಂಜುರಾತಿ ನಿಯಮ 1969 ರ ನಿಯಮ 5 ರಂತೆ ಶೇಕಡವಾರು 50% ಜಮೀನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿರಿಸಲು ಅವಕಾಶವಿದ್ದು ನಿಯಮ 7 ರಡಿ ಜಮೀನು ಹಂಚಿಕೆ ಮಾಡಲು ಅವಕಾಶವಿರುತ್ತದೆ. ಬಾಕಿ ಉಳಿದಿರುವ ಡಿ.ಸಿ ಮನ್ನಾ ಜಮೀನುಗಳನ್ನು ಅರ್ಹರಿಗೆ ಶೀಘ್ರವಾಗಿ ಹಂಚಿಕೆ ಮಾಡುವ ಉದ್ದೇಶಕ್ಕಾಗಿ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವ ಕುರಿತು ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಡಿ.ಸಿ. ಮನ್ನಾ ಸಮಿತಿಯನ್ನು ರಚಿಸಲಾಗಿರುತ್ತದೆ ಎಂದು ಶಾಸಕರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಕೊರಗ ಸಮುದಾಯಕ್ಕೂ ಕೃಷಿ ಭೂಮಿ ಹಕ್ಕು ನೀಡಲು ಮನವಿ:
ಉಡುಪಿ ಜಿಲ್ಲೆಯಲ್ಲಿ ಮೂಲ ನಿವಾಸಿ ಕೊರಗ ಸಮುದಾಯದವರು ಕೃಷಿ ಭೂಮಿ ಹಕ್ಕಿಗಾಗಿ ಅಗ್ರಹಿಸುತ್ತಿದ್ದು, ಜಿಲ್ಲೆಯಲ್ಲಿ ಕೊರಗ ಸಮುದಾಯದವರು ಕೃಷಿ ಭೂಮಿ ವಂಚಿತರಾಗಿರುವುದರಿಂದ ಈ ಸಮುದಾಯಕ್ಕೆ ಕೃಷಿ ಭೂಮಿ ಮಂಜೂರು ಮಾಡಲು ಕೇಳಿರುವ ಉಪ ಪ್ರಶ್ನೆಗೆ ಉತ್ತರಿಸಿದ ಸಚಿವರು ಜಿಲ್ಲೆಯಲ್ಲಿ ಭೂ ರಹಿತ ಕೊರಗ ಸಮುದಾಯದವರಿಗೆ ಜಮೀನು ಮಂಜೂರಾತಿ ಸಂಬಂಧ ಪರಿಶೀಲಿಸಿ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವ ಬಗ್ಗೆ ತಹಸೀಲ್ದಾರರಿಗೆ ನಿರ್ದೇಶನ ನೀಡಲಾಗಿರುತ್ತದೆ ಎಂದು ಸಚಿವರು ಉತ್ತರಿಸಿದ್ದಾರೆ.

Exit mobile version