Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಸೈಂಟ್ ಥಾಮಸ್ ಕಿಂಡರ್‌ಗಾರ್ಟನ್ ಪುಟಾಣಿಗಳ ಪದವಿ ಪ್ರದಾನ ಸಮಾರಂಭ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಸೈಂಟ್ ಥಾಮಸ್ ಕಿಂಡರ್‌ಗಾರ್ಟನ್ ಶಾಲೆಯಲ್ಲಿ “ಲಿಟಲ್ ವಿಂಗ್ಸ್ ಗ್ರಾಜುಯೇಶನ್ 2026” ಪದವಿ ಪ್ರದಾನ ಸಮಾರಂಭವು ಗುರುವಾರ ಶಾಲೆಯ ಆಡಿಯಟೋರಿಯಂನಲ್ಲಿ ಸಂಭ್ರಮದಿಂದ ನೆರವೇರಿತು. ಪುಟ್ಟ ಮಕ್ಕಳ ಉತ್ಸಾಹ, ಸಂಭ್ರಮ, ಪೋಷಕರ  ಹರ್ಷ ಹಾಗೂ ಶಿಕ್ಷಕರ ಸಮರ್ಪಣೆ ಒಂದಾಗಿ ಈ ಕಾರ್ಯಕ್ರಮವು ಸ್ಮರಣೀಯವಾಗಿಸಿತು .

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮದೂರು ಭಾರತ್ ಮಾತಾ ಪ್ರೌಢಶಾಲೆಯ ಸಂಚಾಲಕರಾದ ಫಾದರ್ ಜೋಸೆಫ್ ಮಟ್ಟಮ್  ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ತಮ್ಮ ಭಾಷಣದಲ್ಲಿ ಮಕ್ಕಳ ಜೀವನದಲ್ಲಿ ಪ್ರಾಥಮಿಕ ಶಿಕ್ಷಣದ ಮಹತ್ವವನ್ನು ವಿವರಿಸಿ, ಮಕ್ಕಳಿಗೆ ಮನೆಯಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಸಿಕೊಡಬೇಕು. ಮಕ್ಕಳಿಗೆ ಮೌಲ್ಯಯುತವಾದ ಜೀವನ ನಡೆಸಲು ಪ್ರೇರಣೆಯನ್ನು ನೀಡಬೇಕು. ಮಕ್ಕಳ ಚಿಂತನೆಗಳನ್ನ ಬದಲಾಯಿಸಿದರೆ ಮಾತ್ರ ಅದು ಅವರ ಭವಿಷ್ಯಕ್ಕೆ ಒಳ್ಳೆದಾಗಬಹುದು. ಈ ಶಾಲೆಯಲ್ಲಿ  ಮಕ್ಕಳಿಗೆ ಉತ್ತಮ ಮೌಲ್ಯಗಳೊಂದಿಗೆ ಶಿಕ್ಷಣ ನೀಡುತ್ತಿದ್ದಾರೆ ಎಂದು ಶ್ಲಾಘಿಸಿ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿರುವ ಶಾಲೆಯ ಪ್ರಾಂಶುಪಾಲರಾದ ಫಿಲಿಪ್ ನೆಲ್ಲಿವಿಲ್ಲ ಅವರು ಮಾತನಾಡಿ, ಇಂದು ನಮ್ಮ ಪುಟ್ಟ ಮಕ್ಕಳ ಮೊದಲ ಸಾಧನೆಯನ್ನು ಸಂತೋಷ ಮತ್ತು ಹೆಮ್ಮೆಯಿಂದ ಆಚರಿಸುವ ವಿಶೇಷ ದಿನ. ಚಿಕ್ಕ ಬೀಜದಂತೆ ಆರಂಭಿಸಿದ ಅವರ ಪ್ರೀತಿ, ಮಾರ್ಗದರ್ಶನ ಮತ್ತು ಪ್ರಯತ್ನದಿಂದ ಬೆಳೆಯುತ್ತಿರುವ ಚಿಗುರು ಗಿಡಗಳಾಗಿದ್ದಾರೆ. ಪೋಷಕರ ಬೆಂಬಲ, ಶಿಕ್ಷಕರ ಮಾರ್ಗದರ್ಶನದಿಂದ ಅವರು ಹೊಸ ಜ್ಞಾನ ಮತ್ತು ಮೌಲ್ಯಗಳನ್ನು ಕಲಿತಿದ್ದಾರೆ. “ಗುಡ್‌ಬೈ ಕಿಂಡರ್‌ಗಾರ್ಟನ್” ಅಲ್ಲ, “ಉಜ್ವಲ ಭವಿಷ್ಯಕ್ಕೆ ಸ್ವಾಗತ” – ಎಂದು ಎಲ್ಲಾ ಮಕ್ಕಳಿಗೂ ಹಾರೈಸಿ ಅಭಿನಂದಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಎಲ್ ಕೆ ಜಿ ವಿದ್ಯಾರ್ಥಿಗಳೇ ನಿರ್ವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸುವ್ಯವಸ್ಥಿತವಾಗಿ ನಡೆಸಿದರು. ಆರಂಭದಲ್ಲಿ ವಿದ್ಯಾರ್ಥಿಗಳಿಂದ ಸ್ವಾಗತ ಭಾಷಣ ನಡೆಯಿತು. ನಂತರ ಪುಟ್ಟ ಮಕ್ಕಳಿಂದ ನೃತ್ಯ, ಹಾಡು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಾ ಎಲ್ಲರ ಮನಸೆಳೆಯುವಂತಾಯಿತು.

ಕಿಂಡರ್  ಗಾರ್ಟನ್ ವಿಭಾಗದ ಮುಖ್ಯಶಿಕ್ಷಕಿ ಸಿಸ್ಟರ್ ಸೋಫಿಯಾ ಅವರ ನೇತೃತ್ವದಲ್ಲಿ ಪ್ರತಿಜ್ಞಾ ವಾಚನ ನಡೆಯಿತು. ಇದು ಮಕ್ಕಳಲ್ಲಿ ಶಿಸ್ತು, ನೈತಿಕತೆ ಹಾಗೂ ದೇಶಭಕ್ತಿ ಮೌಲ್ಯಗಳನ್ನು ಬೆಳೆಸುವಲ್ಲಿ ಸಹಾಯ ಮಾಡಿತು. ಬಳಿಕ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಕಿಂಡರ್‌ಗಾರ್ಟನ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪೋಷಕರಾದ ಶಾಂತಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಶಾಲೆಯ ಶಿಸ್ತು, ಉತ್ತಮಗುಣಮಟ್ಟದ ಶಿಕ್ಷಣ ಹಾಗೂ ಮಕ್ಕಳಲ್ಲಿ ಬೆಳೆಸಿದ ಸಂಸ್ಕಾರಗಳನ್ನು ಮೆಚ್ಚಿದರು. ಶಿಕ್ಷಕರ ಸಮರ್ಪಣೆ ಮತ್ತು ಮಕ್ಕಳಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಅವರು ಪ್ರಶಂಸಿಸಿದರು.

ವಿದ್ಯಾರ್ಥಿಗಳು ಸಹ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶಾಲೆಯಲ್ಲಿ ಕಳೆದ ದಿನಗಳು, ಸ್ನೇಹಿತರೊಂದಿಗೆ ಕಳೆಯಲಾದ ಕ್ಷಣಗಳು ಹಾಗೂ ಶಿಕ್ಷಕರ ಮಾರ್ಗದರ್ಶನವನ್ನು ನೆನಪಿಸಿಕೊಂಡು ಸಂತೋಷ ವ್ಯಕ್ತಪಡಿಸಿದರು. ಮುಂದಿನ ವಿದ್ಯಾಭ್ಯಾಸಕ್ಕೆ ಈ ಶಾಲೆಯ ಅನುಭವವು ನಮಗೆ ಉತ್ತಮ ಆಧಾರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಧನ್ಯವಾದಗಳ ಮಾತು . ಅತಿಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಸಮಾರಂಭವು ಸಂತೋಷಭರಿತ ಹಾಗೂ ಉತ್ಸಾಹಪೂರ್ಣ ವಾತಾವರಣದಲ್ಲಿ ಯಶಸ್ವಿಯಾಗಿ  ಸಂಪನ್ನಗೊಂಡಿತು.

Exit mobile version