Site icon Kundapra.com ಕುಂದಾಪ್ರ ಡಾಟ್ ಕಾಂ

ಜೀವನದ ಯಶಸ್ಸಿನಲ್ಲಿ ನೈತಿಕ ಮೌಲ್ಯಗಳ ಪಾತ್ರ ಬಹುದೊಡ್ಡದು: ಡಾ. ಹೆಚ್.ಎಸ್. ಶೆಟ್ಟಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ನೈತಿಕತೆ, ನಿರಂತರ ಕಲಿಯುವಿಕೆ ಮತ್ತು  ಜೀವನ ಮೌಲ್ಯಗಳು  ಸುಸಂಬದ್ಧ ಮತ್ತು ಸಂತೋಷದ ಬದುಕಿಗೆ ಆಧಾರಸ್ತಂಭ ಎಂದು ಮೈಸೂರು ಮರ್ಕಂಟೈಲ್ ಕಂಪೆನಿ ಲಿಮಿಟೆಡ್ ಇದರ ಅಧ್ಯಕ್ಷರು ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ರಿ., ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಹೆಚ್.ಎಸ್. ಶೆಟ್ಟಿ ಹೇಳಿದರು. 

ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೀವನದ ಯಶಸ್ಸಿನಲ್ಲಿ ನೈತಿಕ ಮೌಲ್ಯಗಳ ಪಾತ್ರ ಬಹುದೊಡ್ಡದು. ಪ್ರತಿ ಸಂದೇಶಗಳು, ಅನುಭಗಳು, ಜ್ಞಾನ ಇವೆಲ್ಲವೂ ಮನುಷ್ಯನ ವ್ಯಕ್ತಿತ್ವವನ್ನು ಬದಲಾಯಿಸುವ ಅತ್ಯುತ್ತಮ ಸಾಧನಗಳು. ಇದರಿಂದ ಕೌಟುಂಬಿಕ, ಸಾಮಾಜಿಕ ಜೀವನ ಚೆನ್ನಾಗಿರುತ್ತದೆ. ಅಲ್ಲದೇ  ರಾಷ್ಟ್ರದ ಬೆಳವಣಿಗೆಯಲ್ಲಿ ನಮ್ಮ ಕೊಡುಗೆಯನ್ನು ಅತ್ಯುತ್ತಮ ರೀತಿಯಲ್ಲಿ ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತದ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಯುವಜನತೆಯ ಓದುವಿಕೆ,  ಜ್ಞಾನ ಮತ್ತು  ಅನುಭವಗಳ ಆಳವನ್ನು ಕಸಿದುಕೊಳ್ಳುವ ಭೀತಿ ಎದುರಾಗಿದೆ ಎಂದು ವಿಷಾದಿಸಿದರು. ಆದರೂ ಅತಿ  ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ದೇಶ ಇನ್ನೂ ಅಭಿವೃದ್ಧಿಯಾಗಬೇಕಿದೆ. ಅಂದರೆ ಸರ್ವತೋಮುಖ ಬೆಳವಣಿಗೆಗೆ ಯುವಜನರು ಕೊಡುಗೆ ಇನ್ನೂ ಬೇಕಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಬ್ಯಾಂಕ್ ಮಂಗಳೂರು ಇದರ ಮುಖ್ಯ ಕಚೇರಿಯ ಮುಖ್ಯ ವ್ಯವಹಾರಿಕ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಅನುಭವ ಮತ್ತು ಓದುವಿಕೆಗಳಿಂದ ನಮ್ಮಲ್ಲಿನ ಶ್ರೀಮಂತ ಸಂಸ್ಕೃತಿ ಮತ್ತು ಜ್ಞಾನವನ್ನು ಅರಿಯಲು ಸಾಧ್ಯವಾಗುತ್ತದೆ. ಆಳವಾದ ಜ್ಞಾನವು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ ಪ್ರಭು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ದೇವದಾಸ್ .ಕಾಮತ್, ರಾಜೇಂದ್ರ ತೋಳಾರ್ ಉಪಸ್ಥಿತರಿದ್ದರು.

ನಿವೃತ್ತ ಪ್ರಾಧ್ಯಾಪಕರಾದ ಮೀನಾಕ್ಷಿ ಎನ್ ಎಸ್. ಮತ್ತು ಡಾಕ್ಟರೇಟ್ ಪದವಿ ಪಡೆದ ಡಾ. ಶರಣ್ ಎಸ್.ಜೆ, ರ್ಯಾಂಕ್ ವಿದ್ಯಾರ್ಥಿಗಳಾದ ಶ್ರಾವ್ಯ ಎಸ್. ಅಡಿಗ (6ನೇ ರ್ಯಾಂಕ್, ಬಿ.ಬಿ.ಎ),  ಶ್ರಾವ್ಯ ಶೆಣೈ (ಎಂಟನೇ ರ್ಯಾಂಕ್, ಬಿ.ಸಿ.ಎ), ರಕ್ಷಿತಾ (ಒಂಬತ್ತನೇ ರ್ಯಾಂಕ್, ಬಿ.ಸಿ.ಎ), ಮತ್ತು ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಾರ್ಷಿಕ ವರದಿ ವಾಚಿಸಿದರು. ಕಾಲೇಜಿನ ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶದ ಸಂಯೋಜಕರಾದ ಸತ್ಯನಾರಾಯಣ ಸ್ವಾಗತಿಸಿದರು. ಉಪನ್ಯಾಸಕಿಯರಾದ ವಿಜಯಲಕ್ಷ್ಮಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ. ಶೈಲಾ ರಾಮಚಂದ್ರ ಮತ್ತು ಸ್ನೇಹ ಎಸ್. ಅತಿಥಿಗಳನ್ನು ಪರಿಚಯಿಸಿ. ಹರ್ಷಿತಾ ವಿದ್ಯಾರಾಣಿ, ದಿವ್ಯಾ ವಿದ್ಯಾರ್ಥಿ ವೇತನ ವಿಜೇತ ಮತ್ತು ಸಾಧಕ ವಿದ್ಯಾರ್ಥಿಗಳ ವರದಿ ವಾಚಿಸಿದರು.  ಶ್ರೀನಿಧಿ ವಂದಿಸಿದರು.

Exit mobile version