ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿ.ಬಿ.ಎಸ್‌ಇ ಸ್ಕೂಲ್‌ನಲ್ಲಿ ಯು.ಕೆ.ಜಿ. ಮಕ್ಕಳ ಗ್ರಾಜುಯೇಷನ್ ಡೇ ಕಾರ್ಯಕ್ರಮವನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು.
ಅತಿಥಿಗಳಾಗಿ ಆಗಮಿಸಿದ ವರ್ಷಿಣಿ ಪೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಬಾಲ್ಯದಲ್ಲಿ ಹೆತ್ತವರು ಬಹಳಷ್ಟು ಮುತುವರ್ಜಿ ವಹಿಸಿ. ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾಗಬೇಕು. ಮಕ್ಕಳ ಪ್ರಾರಂಭಿಕ ಬೆಳವಣಿಗೆ ಹಾಗೂ ಕಲಿಕೆಯಲ್ಲಿ ಹೆತ್ತವರ ಪಾತ್ರ ಮಹತ್ತರವಾಗಿರುತ್ತದೆ. ಮಕ್ಕಳ ಸೂಕ್ಷ್ಮ ಮನಸ್ಸಿನ ಬೆಳವಣಿಗೆಗೆ ಉತ್ತಮ ವಾತಾವರಣ ಕಲ್ಪಿಸಿ ಕೊಡುವುದು ಪೋಷಕರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ನಿತಿನ್ ಡಿ’ ಆಲ್ಮೇಡಾ ಪ್ರಾಸ್ತಾವಿಕ ಮಾತುಗಳನ್ನಾಡಿ, ಶಾಲಾ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿವರಿಸಿದರು. ಪೋಷಕರು ಮಕ್ಕಳೊಂದಿಗೆ ಸಮಯವನ್ನು ವ್ಯಯಿಸಿ ಅವರ ಸಂತೋಷದಲ್ಲಿ ಭಾಗವಹಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಶುಭ ಕೋರಿ ಪೋಷಕರ ಸಹಕಾರವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಶಾಲಾ ಸಿಬ್ಬಂದಿ ಅವರು ಉಪಸ್ಥಿತರಿದ್ದರು. ಸೆಲ್ಫಿ ಕಾರ್ನರ್ ಹಾಗೂ ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಗಳ ವಸ್ತು ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.
ಶಿಕ್ಷಕಿಯರಾದ ಅಕ್ಷಯ ಶೆಟ್ಟಿ ಸ್ವಾಗತಿಸಿ, ಪ್ರೇಮ ರಾವ್ ಅವರು ಕಾರ್ಯಕ್ರಮ ನಿರೂಪಿಸಿ, ವಿಲಾಸಿನಿ ಶೆಟ್ಟಿ ವಂದಿಸಿದರು.

