Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ಇಂಟಿಗ್ರೇಟೆಡ್ ಕ್ಲಿನಿಕಲ್ ಡಯಾಗ್ನಾಸ್ಟಿಕ್ಸ್‌ ಲ್ಯಾಬೋರೇಟರಿ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ
ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ “ಆಳ್ವಾಸ್ ಇಂಟಿಗ್ರೇಟೆಡ್ ಕ್ಲಿನಿಕಲ್ ಡಯಾಗ್ನಾಸ್ಟಿಕ್ಸ್ ಲ್ಯಾಬೋರೇಟರಿ” ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಆಲೈಡ್ ಹೆಲ್ತ್ ಸೈನ್ಸ್ಸ್‌ನ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ ಕೆ. ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಕೇಂದ್ರ ಪ್ರಯೋಗಾಲಯ ಮತ್ತು ರೇಡಿಯಾಲಜಿ ವಿಭಾಗಗಳು ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿವೆ. ರಾಷ್ಟ್ರೀಯ ವೈದ್ಯಕೀಯ ಆಯೋಗ  ಹಾಗೂ ಭಾರತೀಯ ವೈದ್ಯಕೀಯ ಮಂಡಳಿಯ ಪರಿಶೀಲನೆಗಳಲ್ಲಿ ಈ ಎರಡು ವಿಭಾಗಗಳು ಪ್ರಮುಖವಾಗಿ ಗಮನ ಸೆಳೆಯುತ್ತವೆ. ಯಾವುದೇ ವೈದ್ಯಕೀಯ ಸಂಸ್ಥೆಯ ಮೂಲಸೌಕರ್ಯ ಮತ್ತು ಗುಣಮಟ್ಟದ ಮೌಲ್ಯಮಾಪನದಲ್ಲಿ ಈ ವಿಭಾಗಗಳನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದರು.

ಕೇಂದ್ರ ಪ್ರಯೋಗಾಲಯದ ಸ್ಥಾಪನೆ, ಕೇವಲ ಸೌಲಭ್ಯವಲ್ಲ, ಅದು ಒಂದು ಸಂಸ್ಥೆಯ ಶೈಕ್ಷಣಿಕ ಹಾಗೂ ವೈದ್ಯಕೀಯ ಗುಣಮಟ್ಟದ ಪ್ರತಿಬಿಂಬವಾಗಿದೆ. ಇಂತಹ ಪ್ರಯೋಗಾಲಯಗಳು ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಸಹಕಾರಿಯಾಗುವುದರ ಜೊತೆಗೆ, ರೋಗಿಗಳಿಗೆ ನಿಖರ ಮತ್ತು ವೇಗವಾದ ನಿರ್ಧಾರಾತ್ಮಕ ಸೇವೆಯನ್ನು ಒದಗಿಸುತ್ತದೆ ಎಂದರು.

ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಸ್ ಆ್ಯಂಡ್ ರಿಸರ್ಚ್ ಸೆಂಟರ್‌ನ ವೈದ್ಯಕೀಯ ಅಧೀಕ್ಷಕ ಡಾ. ಪಾಂಗಾಳ ಹರೀಶ್ ನಾಯಕ್ ಮಾತನಾಡಿ, ಆರೋಗ್ಯ ಸೇವೆಯಲ್ಲಿ ನಿಖರವಾದ ರೋಗನಿರ್ಣಯ ಅತ್ಯಂತ ಪ್ರಮುಖವಾಗಿದೆ. ಸರಿಯಾದ ಚಿಕಿತ್ಸೆ ನೀಡಲು ಸರಿಯಾದ ಪರೀಕ್ಷೆಗಳು ಅವಶ್ಯಕ. ಈ ಲ್ಯಾಬೋರೇಟರಿ ಮೂಲಕ ವಿವಿಧ ಪರೀಕ್ಷೆಗಳು ಒಂದೇ ಸ್ಥಳದಲ್ಲಿ ಲಭ್ಯವಾಗುವುದರಿಂದ ರೋಗಿಗಳಿಗೆ ಸಮಯ ಮತ್ತು ವೆಚ್ಚ ಎರಡೂ ಉಳಿತಾಯವಾಗುತ್ತದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ವಿನಯ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಡಾ. ಹನ, ಡಾ. ಗ್ರೀಷ್ಮಾ ಇದ್ದರು. ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಸ್ ಆ್ಯಂಡ್ ರಿಸರ್ಚ್ ಸೆಂಟರ್‌ನ ಡೀನ್ ಡಾ. ಮಹಾಬಲ ಶೆಟ್ಟಿ ಸ್ವಾಗತಿಸಿ, ಡಾ. ಆಶಾರಾಣಿ ವಂದಿಸಿ, ನರೇಶ್ ರೈ ಕಾರ್ಯಕ್ರಮ ನಿರೂಪಿಸಿದರು.

Exit mobile version