Kundapra.com ಕುಂದಾಪ್ರ ಡಾಟ್ ಕಾಂ

ರೇಡಿಯೋ ಮಾಧ್ಯಮವು ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ: ಸಂಸದ ಕೋಟ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ರೇಡಿಯೋ ಮಾಧ್ಯಮವು ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ ಎಂದು ಉಡುಪಿ ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬುಧವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೇಡಿಯೋ ಕುಂದಾಪ್ರ 89.6 ಎಫ್.ಎಮ್ ನ ವಾರ್ಷಿಕೋತ್ಸವ “ಹೌಂದೇರಾಯ್ನ ವಾಲ್ಗವಾ” ಸಮಾರಂಭವನ್ನು ದೀಪ ಬೆಳಗಿಸಿ ಮತ್ತು ಗುರು ಮಾರುತಿ ಹೌಂದೇರಾಯ್ನ ವಾಲ್ಗವಾ ತಂಡ ರಿ, ಪಾರಂಪಳ್ಳಿ ಸಾಲಿಗ್ರಾಮ ಅವರಿಗೆ ಸಿಂಗಾರ ಹೂವನ್ನು ನೀಡುವುದರ ಮೂಲಕ ವಿಭಿನ್ನವಾಗಿ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆಧುನಿಕತೆ ಎನ್ನುವುದು ಹಾಸುಹೊಕ್ಕಾಗಿದೆ. ಆದರೆ ನಾವು ಎಷ್ಟೇ  ಆಧುನಿಕೃತಗೊಂಡರೂ ಮೂಲ ಸಂಸ್ಕೃತಿಯನ್ನು ನಾವು ಉಳಿಸಿಕೊಂಡು ಹೋಗಬೇಕು. ಸಾಮಾಜಿಕವಾಗಿ ಚರ್ಚೆಗಳಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಬಹಳವಿದೆ. ಮಾಧ್ಯಮಗಳು ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ವಹಿಸಿದ್ದರು. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ವೇದಿಕೆಯಲ್ಲಿ ಕುಂದಾಪುರದ ಹಿರಿಯ ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತಿನ ಕುಂದಾಪುರ ತಾಲೂಕಿನ ಅಧ್ಯಕ್ಷ ಡಾ. ಉಮೇಶ್ ಪುತ್ರನ್, ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಮ್.ಗೊಂಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರೇಡಿಯೋ ಕುಂದಾಪ್ರ 89.6 ಎಫ್.ಎಮ್ ಮೂಲಕ ವಿವಿಧ ಕಾರ್ಯಕ್ರಮಗಳನ್ನು ನೀಡಿದ ಸತೀಶ್ ಶೆಟ್ಟಿಗಾರ್ ಜೆಪ್ತಿ, ಚಂದ್ರ ಮೊಗವೀರ, ಸುಬ್ರಹ್ಮಣ್ಯ ಪೂಜಾರಿ ಕುಂದಬಾರಂದಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರೇಡಿಯೋ ಕುಂದಾಪ್ರದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.

ಸಭಾ ಕಾರ್ಯಕ್ರಮದ ನಂತರ ಮಿತ್ರ ಸಂಗಮ ರಿ. ದೀಮ್ಸಾಲ್ ತಂಡ ಬೀಜಾಡಿ ಗೋಪಾಡಿ ಅವರಿಂದ ದೀಮ್ಸಾಲ್ ರವಿ ಖಾರ್ವಿ ಮತ್ತು ಅಟೋ ಚಾಲಕಿ ದೀಪ ಅವರಿಂದ ಮೀನಿನ ಮಾತ್ಕತಿ ಸುಪ್ರೀತಾ ಪುರಾಣಿಕ ಅವರಿಂದ ಕುಂದಾಪುರ ಕನ್ನಡದಲ್ಲಿ ಹರಿಕಥೆ, ಗುರು ಮಾರುತಿ ಹೌಂದೇರಾಯ್ನ ಜಾನಪದ ನೃತ್ಯ ತಂಡ ರಿ., ಪಾರಂಪಳ್ಳಿ ಸಾಲಿಗ್ರಾಮ ಇವರಿಂದ ಹೌಂದೇರಾಯ್ನ ವಾಲ್ಗವಾವನ್ನು, ಕುಟ್ಟಿ ಕುಂದಾಪ್ರ, ಕೋಲು ಹೊಯ್ಯುವ ಹಾಡು,  ಮತ್ತು ವಿದ್ಯಾರ್ಥಿಗಳಿಂದ ಕುಂದಾಪುರ ಕನ್ನಡ ತಾಳಮದ್ದಳೆ ಕಾರ್ಯಕ್ರಮಗಳು ನಡೆದವು.

ರೇಡಿಯೋ ಕುಂದಾಪ್ರ 89.6 ಎಫ್.ಎಮ್ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

Exit mobile version