ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮೃದ್ಧ ಬೈಂದೂರು 300 ಟ್ರೀಸ್ ಯೋಜನೆಯಲ್ಲಿ ಸ್ವಯಂ ಸ್ಪೂರ್ತಿ ಫೌಂಡೇಶನ್ ಬೆಂಗಳೂರು ಇವರ ಸಹಕಾರದೊಂದಿಗೆ ಬೈಂದೂರು ಕ್ಷೇತ್ರದ ವಿವಿಧ ಸರಕಾರಿ ಶಾಲೆಗಳಲ್ಲಿ ಕೌಶಲ್ಯ ಕೇಂದ್ರವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಉದ್ಘಾಟಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಗಿಹಕ್ಲು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾನ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಮ್ಮಾಡಿ ಇಲ್ಲಿ ಕಂಪ್ಯೂಟರ್ ಲ್ಯಾಬ್, ಮಿನಿ ಲೈಬ್ರರಿ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಒಳಗೊಂಡ ಕೌಶಲ್ಯ ಕೇಂದ್ರವನ್ನು ವಿವಿಧ ಕಂಪನಿಗಳ ಸಿಎಸ್ಆರ್ ಸಹಕಾರದಿಂದ ಸ್ವಯಂ ಸ್ಫೂರ್ತಿ ಫೌಂಡೇಶನ್ ಸಂಸ್ಥೆಯು ನಿರ್ಮಿಸಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು ಸರಕಾರಿ ಶಾಲೆಯ ಉಳಿವಿಗಾಗಿ ಆರಂಭಿಸಿದ 300 ಟ್ರೀಸ್ ಯೋಜನೆಯಿಂದ ಇಂದು ಸುಮಾರು 150ಕ್ಕೂ ಹೆಚ್ಚು ಶಾಲೆಗಳು ಯಾವುದಾದರೂ ಒಂದು ಸೌಲಭ್ಯವನ್ನು ಪಡೆದುಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಿದೆ. ಈ ಯೋಜನೆಗೆ ಶ್ರಮಿಸುತ್ತಿರುವ ಎಲ್ಲಾ ವಿದ್ಯಾಭಿಮಾನಿಗಳಿಗೂ ಧನ್ಯವಾದವನ್ನು ಸಮರ್ಪಿಸಿದರು. ಕಾಂತಿ ಸ್ವೀಟ್ಸ್, ಪ್ಲಾನ್ ವ್ಯೂವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಟರಂಟೊ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಇನ್ಫೋಬ್ಲಾಕ್ಸ್ ಇವರ ಸಿಎಸ್ಆರ್ ನಿಧಿಯಿಂದ ಕೌಶಲ್ಯ ಕೇಂದ್ರವನ್ನು ನಿರ್ಮಿಸಲಾಗಿದೆ.
ಇದೇ ಸಮಯದಲ್ಲಿ ಎಂ.ಆರ್.ಪಿ.ಎಲ್. ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಪ್ಪಾಡಿ ಇಲ್ಲಿ ನಿರ್ಮಿಸಿದ ನೂತನ 2 ತರಗತಿ ಕೋಣೆಗಳನ್ನು ಶಾಸಕರು ಉದ್ಘಾಟಿಸಿದರು.
ಡಿಬಿಆರ್ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ವತಿಯಿಂದ ಕಪ್ಪಾಡಿ ಶಾಲೆ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಕಿಟ್ ಮತ್ತು ಟಿಫಿನ್ ಬಾಕ್ಸ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಯಂ ಸ್ಪೂರ್ತಿ ಫೌಂಡೇಶನ್ ಸಂಸ್ಥಾಪಕರಾದ ನಾಗರಾಜ್ ಶೆಟ್ಟಿ ಜಡ್ಕಲ್, ಇನ್ಫೋ ಬ್ಲಾಕ್ ಸಂಸ್ಥೆಯ ಮಹೇಶ್ ಪೂಜಾರಿ, ಎಂ ಆರ್ ಪಿ ಎಲ್ ಸಂಸ್ಥೆಯ ಯಾದವ್, ಡಿ ಬಿ ಆರ್ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ಪ್ರವರ್ತಕರಾದ ರವಿಚಂದ್ರ ವಿಕೆ, ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು, ಎಸ್. ಡಿ.ಎಂ. ಸಿ ಅಧ್ಯಕ್ಷರು ಹಾಗೂ ಸದಸ್ಯರು, ಊರಿನ ಪ್ರಮುಖರು, ಶಿಕ್ಷಣ ಅಭಿಮಾನಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.