ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ಹಾಗೂ ಸಂಜಯ ಗಾಂಧಿ ಇಂಗ್ಲಿಷ್ ಮೀಡಿಯಂ ಶಾಲೆ ಅಂಪಾರು ಇವುಗಳು ಅಪೂರ್ವ ಪುಣ್ಯಕ್ಷಣಕ್ಕೆ ಸಾಕ್ಷಿಯಾದವು. ಜಗದ್ಗುರುಗಳಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ತಮ್ಮ ಪವಿತ್ರ ಪಾದಾರವಿಂದಗಳಿಂದ ಶಾಲೆಯನ್ನು ಪಾವನಗೊಳಿಸಿ, ಸಂಪೂರ್ಣ ಸಂಸ್ಥೆಗೆ ದೈವಿಕ ಆಶೀರ್ವಾದವನ್ನು ನೀಡಿದರು.
ಈ ಮಹತ್ವದ ಕಾರ್ಯಕ್ರಮವನ್ನು ವೇದಮೂರ್ತಿ ವಿದ್ವಾನ್ ವಾಸುದೇವ ಜೋಯಿಸರು ತಟ್ಟುವಟ್ಟು ಹಾಲಾಡಿ ಅವರ ಮಾರ್ಗದರ್ಶನದಲ್ಲಿ ಅತ್ಯಂತ ಭಕ್ತಿಭಾವದಿಂದ ಆಯೋಜಿಸಲಾಯಿತು.
ಶ್ರೀ ಗುರುಗಳನ್ನು ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ, ಕಾರ್ಯದರ್ಶಿ ನವೀನ್ ಶೆಟ್ಟಿ, ಖಜಾಂಚಿ ಕೊಡ್ಲಾಡಿ ಸುಭಾಷ್‌ಚಂದ್ರ ಶೆಟ್ಟಿ, ಟ್ರಸ್ಟ್ ನ ನಿರ್ದೇಶಕರಾದ ಅಂಪಾರು ಕಿರಣ್ ಹೆಗ್ಡೆ ಹಾಗೂ ಉಮೇಶ್ ಕೊಠಾರಿ ಅವರು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.
ಕೊಡ್ಲಾಡಿ ಕೃಷ್ಣ ಮೂರ್ತಿ ಅಡಿಗ ಬಳಗದವರಿಂದ ವೇಧಘೋಷದೊಂದಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಕಾರ್ಯಕ್ರಮದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶ್ರೀಗಳ ಸಮ್ಮುಖದಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿ ಎಲ್ಲರ ಮನಸೆಳೆಯುವಂತೆ ಮಾಡಿದರು.
ಶಾಲೆಯ ಆಡಳಿತಾಧಿಕಾರಿ ಚೈತ್ರಾ ಯಡಿಯಾಳ ಸೇರಿದಂತೆ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಶ್ರೀಗಳ ದಿವ್ಯ ಆಶೀರ್ವಾದವನ್ನು ಪಡೆದು ಧನ್ಯರಾದರು.
ಈ ಪವಿತ್ರ ಸಂದರ್ಭಕ್ಕೆ ಸ್ಥಳೀಯ ಗಣ್ಯರಾದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು , ಸಿ.ಎ. ಬ್ಯಾಂಕ್ ಅಧ್ಯಕ್ಷರು ಹಾಗೂ ಶ್ರೀ ರಾಮ ಗೇರುಬೀಜ ಕಾರ್ಖಾನೆ ಮಾಲೀಕರಾದ ಅನಂತ ಪದ್ಮನಾಭ ಪ್ರಭು, ರಾಘವೇಂದ್ರ ಪ್ರಭು ಮತ್ತು ರಂಜನಾ ಪ್ರಭು ಹಾಗೂ ಊರಿನ ಹಿರಿಯರು ಹಾಗೂ ಪೋಷಕರನೇಕರು ಭಾಗವಹಿಸಿ ಆಶೀರ್ವಾದ ಪಡೆದರು.
ಈ ಮಹಾನ್ ಭೇಟಿಯ ಸಂದರ್ಭದಲ್ಲಿ ಸನ್ನಿಧಾನಂಗಳವರು ಶಾಲೆಗೆ ಶ್ರೀ ಶಾರದಾ ದೇವಿಯ ವಿಗ್ರಹದೊಂದಿಗೆ ವಿಶೇಷ ಪ್ರಸಾದವಾಗಿ ನೀಡಿದ್ದು, ಶಾಲೆಯ ಸಮಗ್ರ ಅಭಿವೃದ್ಧಿಗೆ ಹರಸಿ ಆಶೀರ್ವದಿಸಿದರು .
ಈ ದಿವ್ಯ ಕ್ಷಣಗಳನ್ನು ಅನುಭವಿಸಿದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಟ್ರಸ್ಟ್ ಸದಸ್ಯರು ಎಲ್ಲರೂ ಅಪಾರ ಸಂತೋಷದಿಂದ ಹಾಗೂ ದೈವಾನುಗ್ರಹದಿಂದ ತುಂಬಿ ತುಳುಕಿದರು. ಇದು ಶಾಲೆಯ ಇತಿಹಾಸದಲ್ಲಿ ಚಿರಸ್ಮರಣೀಯ ದಿನವಾಗಿ ಉಳಿಯಲಿದೆ

