Site icon Kundapra.com ಕುಂದಾಪ್ರ ಡಾಟ್ ಕಾಂ

ಬಾಳೆಬರೆ ಘಾಟಿಯಲ್ಲಿ ವಾಹನ ಸಂಚಾರ ನಿಷೇಧ: ಉಡುಪಿ ಡಿಸಿ ಆದೇಶ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಬಾಳೆಬರೇ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟಿಯಲ್ಲಿ ಏಪ್ರಿಲ್ 9 ರಂದು ತಡೆಗೋಡೆಯೊಂದಿಗೆ ರಸ್ತೆ ಅಗಲೀಕರಣ ಕಾಮಗಾರಿಯ ಇನ್ನುಳಿದ ಭಾಗದ ತಳಪಾಯದ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸುಮಾರು 12 ಮೀಟರ್ ಎತ್ತರದಲ್ಲಿ ಹಾಲಿ ಇರುವ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ  ಸುಮಾರು 5 ಅಡಿ ಅಗಲದವರೆಗೆ ಮತ್ತೊಮ್ಮೆ ಭೂ ಕುಸಿತ ಉಂಟಾಗಿ ಕಾಂಕ್ರೀಟ್ ರಸ್ತೆಯ ಮೇಲ್ಮೆನಲ್ಲಿ ಅಲ್ಲಲ್ಲಿ ಬಿರುಕುಗಳು ಕಂಡುಬಂದಿದೆ.

ಸುರಕ್ಷತಾ ದೃಷ್ಟಿಯಿಂದ ಹುಲಿಕಲ್ ಘಾಟ್ ವ್ಯಾಪ್ತಿಯ ಹೇರ್‌ಪಿನ್ ತಿರುವಿನಲ್ಲಿ ಪ್ರಸ್ತುತ ಕೈಗೊಳ್ಳುತ್ತಿರುವ ರಕ್ಷಣಾತ್ಮಕ ಕಾಮಗಾರಿಯ ಪೂರ್ಣಗೊಳ್ಳುವವರೆಗೆ, ಸಾರ್ವಜನಿಕ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ನಿಯಮ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮವಾಳಿಗಳು 1989 ರ ನಿಯಮ 221 (ಎ )(2) & (5) ರನ್ವಯ ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್‌ನ ಮೂಲಕ ಎಲ್ಲಾ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸದ್ರಿ ರಸ್ತೆಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಗೊಳಿಸಿ. ಈ ಕೆಳಕಂಡ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅದೇಶಿಸಿ ಜಿಲ್ಲಾ ದಂಡಾಧಿಕಾರಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಆದೇಶಿಸಿರುತ್ತಾರೆ.

ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿ – 52 ರಸ್ತೆಯ ತೀರ್ಥಹಳ್ಳಿ ಯಿಂದ ಕುಂದಾಪುರ ಕಡೆ ಹೋಗುವ ( ತೀರ್ಥಹಳ್ಳಿ – ರಾವೆ – ಕಾನುಗೋಡು – ಮಾಸ್ತಿಕಟ್ಟೆ – ಹುಲಿಕಲ್ ಘಾಟ್ – ಹೊಸಂಗಡಿ – ಸಿದ್ದಾಪುರ ಮೂಲಕ ಕುಂದಾಪುರ ರಾ. ಹೆ -52) ವಾಹನಗಳು ತೀರ್ಥಹಳ್ಳಿ – ರಾವೆ – ಕಾನುಗೋಡು – ನಗರ – ಕೊಲ್ಲೂರು – ಕುಂದಾಪುರ ರಸ್ತೆ ಮೂಲಕ ಸಂಚರಿಸಬೇಕು.

ನಗರ ಸಿದ್ದಾಪುರ ರಾಜ್ಯ ಹೆದ್ದಾರಿ -278 ರಸ್ತೆಯ ತೀರ್ಥಹಳ್ಳಿಯಿಂದ ಯಡೂರು ಹುಲಿಕಲ್ ಕುಂದಾಪುರ ಕಡೆ ಹೋಗುವ ( ತೀರ್ಥಹಳ್ಳಿ – ಯಡೂರು- ಸುಳುಗೋಡು – ಮಾಸ್ತಿಕಟ್ಟೆ – ಹುಲಿಕಲ್ ಘಾಟ್ – ಹೊಸಂಗಡಿ – ಸಿದ್ದಾಪುರ ಮೂಲಕ ಕುಂದಾಪುರ ಸೇರುವ ರಸ್ತೆ) ವಾಹನಗಳು ತೀರ್ಥಹಳ್ಳಿ – ಯಡೂರು – ಮಾಸ್ತಿಕಟ್ಟೆ – ಕಾನುಗೋಡು – ನಗರ – ಕೊಲ್ಲೂರು – ಕುಂದಾಪುರ ರಸ್ತೆ ಮೂಲಕ ಸಂಚರಿಸಬೇಕು.

ಶಿವಮೊಗ್ಗ / ಸಾಗರ ಕಡೆಯಿಂದ ಹೊಸನಗರದ ಮೂಲಕ ಕುಂದಾಪುರ ಕಡೆ ಹೋಗುವ (ಶಿವಮೊಗ್ಗ / ಸಾಗರ ಕಡೆಯಿಂದ ಹೊಸನಗರ – ನಗರ- ಮಾಸ್ತಿಕಟ್ಟೆ – ಹುಲಿಕಲ್ ಘಾಟ್ – ಹೊಸಂಗಡಿ – ಸಿದ್ಧಾಪುರ ಮೂಲಕ ಕುಂದಾಪುರ ಸೇರುವ ರಸ್ತೆ) ವಾಹನಗಳು ಶಿವಮೊಗ್ಗ ಹೊನ್ನಾವರ ರಾಷ್ಟೀಯ ಹೆದ್ದಾರಿ ಮೂಲಕ ಹೊನ್ನಾವರ ಅನಂತರ ಹೊನ್ನಾವರದಿಂದ – ಭಟ್ಕಳ – ಬೈಂದೂರು ಕುಂದಾಪುರ ರಸ್ತೆ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Exit mobile version