ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಬಂಧಿಕರನ್ನು ಕಂಡು ಮಾತನಾಡಿಸಲು ರಸ್ತೆ ದಾಟಲು ಮುಂದಾದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಸಂಜೆ ವಂಡ್ಸೆಯಲ್ಲಿ ಸಂಭವಿಸಿದೆ.
ವಂಡ್ಸೆಯಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದ ಶಶಿಕಲಾ ಮೊಗವೀರ (52) ಮೃತಪಟ್ಟ ದುರ್ದೈವಿ.
ಮಂಗಳವಾರ ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ವಂಡ್ಸೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿರುವ ದಿನಸಿ ಅಂಗಡಿಗೆ ಸಾಮಾನು ಖರೀದಿಸಲು ಶಶಿಕಲಾ ಅವರು ಬಂದಿದ್ದರು. ಖರೀದಿಯ ಬಳಿಕ ರಸ್ತೆಯ ಇನ್ನೊಂದು ಬದಿಯಲ್ಲಿ ತಮ್ಮ ಸಂಬಂಧಿಕರೊಬ್ಬರು ನಿಂತಿರುವುದನ್ನು ಕಂಡ ಅವರು, ಅತ್ತ ತೆರಳಲು ತಕ್ಷಣವೇ ರಸ್ತೆ ದಾಟಲು ಮುಂದಾಗಿದ್ದಾರೆ. ಇದೇ ವೇಳೆ ಚಿತ್ತೂರು ಕಡೆಯಿಂದ ವಂಡ್ಸೆ ಮಾರ್ಗವಾಗಿ ಅತಿ ವೇಗದಲ್ಲಿ ಬಂದ ಕಾರು ಇವರಿಗೆ ಬಲವಾಗಿ ಡಿಕ್ಕಿ ಹೊಡೆದ ರಭಸಕ್ಕೆ ಶಶಿಕಲಾ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತರು ಪತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೊಲ್ಲೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

