ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಹಾಗೂ ರ‍್ಯಾಗಿಂಗ್ ವಿರೋಧಿ & ಮಾದಕ ದ್ರವ್ಯ ವಿರೋಧಿ ಘಟಕಗಳ ಜಂಟಿ ಆಶ್ರಯದಲ್ಲಿ ನಶಾ ಮುಕ್ತ ಅಭಿಯಾನ ಕಾರ್ಯಕ್ರಮವು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ನಿರಂಜನ ಗೌಡ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ವಿವಿಧ ಬಗೆಯ ಮಾದಕ ವಸ್ತುಗಳು ಹಾಗೂ ಅವುಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿ ಸಮುದಾಯ ಇವುಗಳಿಂದ ದೂರವಿರಬೇಕು, ಆರೋಗ್ಯಪೂರ್ಣ ಜೀವನ ಶೈಲಿಯನ್ನು ಅನುಸರಿಸಬೇಕು ಎಂದರು. ಇದೇ ಸಂದರ್ಭ ಸೈಬರ್ ಕ್ರೈಂ ಕುರಿತು ಮಾಹಿತಿ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೋಸಗಳು ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳು ಈ ಕುರಿತು ಜಾಗೃತರಾಗಬೇಕು. ಅಪರಿಚಿತ ಲಿಂಕ್‌ಗಳು, ಫೋನ್ ಕಾಲ್‌ಗಳು ಮತ್ತು ಸಂದೇಶಗಳಿಗೆ ಎಚ್ಚರಿಕೆಯಿಂದ ಸ್ಪಂದಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ, ಎನ್.ಎಸ್.ಎಸ್. ಘಟಕ – 2ರ ಕಾರ್ಯಕ್ರಮ ಅಧಿಕಾರಿ ಪೂಜಾ ಕುಂದರ್ ಹಾಗೂ ರ‍್ಯಾಗಿಂಗ್ ವಿರೋಧಿ & ಮಾದಕ ದ್ರವ್ಯ ವಿರೋಧಿ ಘಟಕದ ಸಂಚಾಲಕಿ ವಿಲ್ಮಾ ಶೆರಲ್ ಕಾರ್ನಾಲಿಯೊ ಉಪಸ್ಥಿತರಿದ್ದರು.
ರ‍್ಯಾಗಿಂಗ್ ವಿರೋಧಿ ಮತ್ತು ಮಾದಕ ದ್ರವ್ಯ ವಿರೋಧಿ ಘಟಕದ ಸಂಚಾಲಕ ಸತೀಶ್ ಶೆಟ್ಟಿ ಹೆಸ್ಕತ್ತೂರು ಸ್ವಾಗತಿಸಿ, ವಿದ್ಯಾರ್ಥಿ ಸಮರ್ಥ್ ಕಾರ್ಯಕ್ರಮ ನಿರೂಪಿಸಿ, ಶ್ರೀಶಾಂತ್ ಪ್ರಾರ್ಥಿಸಿದರು. ಎನ್.ಎಸ್.ಎಸ್. ಘಟಕ – 1ರ ಕಾರ್ಯಕ್ರಮ ಅಧಿಕಾರಿ ರಾಜೇಶ್ ಶೆಟ್ಟಿ ವಕ್ವಾಡಿ ವಂದಿಸಿದರು.