Site icon Kundapra.com ಕುಂದಾಪ್ರ ಡಾಟ್ ಕಾಂ

ಐಎಂಜೆಐಎಸ್‌ಸಿಯಲ್ಲಿ ವಾರ್ಷಿಕೋತ್ಸವದ ಸಂಭ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
 ಇಲ್ಲಿನ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಾರ್ಷಿಕೋತ್ಸವ-2026 ಅನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಆಸ್ಟ್ರಿಕೋಸ್ ಎಐ, ಬೆಂಗಳೂರು ಇದರ ಸಿಇಒ ಮತ್ತು ಸಂಸ್ಥಾಪಕರಾದ ಡಾ. ಚಿನ್ಮಯಿ ಹೆಗ್ಡೆ ಮಾತನಾಡಿ, “ಶಿಕ್ಷಣ ಸಂಸ್ಥೆಯು ದೊಡ್ಡದೋ ಅಥವಾ ಚಿಕ್ಕದೋ ಎನ್ನುವುದು ಮುಖ್ಯವಲ್ಲ. ಪ್ರತಿಯೊಂದು ಸಂಸ್ಥೆಯು ಸಮಾಜಕ್ಕೆ ಮಹತ್ತರವಾದ ಕೊಡುಗೆಗಳನ್ನು ಸಲ್ಲಿಸುತ್ತದೆ. ಆ ಮೂಲಕ ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಮಸ್ಯೆಗಳು ಅಥವಾ ಕಷ್ಟಗಳು ಬಂದಾಗ ಹೆದರಬಾರದು. ಸಮಸ್ಯೆಗಳು ನಮ್ಮನ್ನು ಬೆಳೆಸುತ್ತವೆ. ಸಾಧನೆಗೆ ಸಮಸ್ಯೆಗಳು ಅಥವಾ ಕಷ್ಟಗಳೇ ದಾರಿದೀಪವಾಗುತ್ತವೆ” ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್.ಎನ್. ಭಟ್ ಅವರು ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯು ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವುದನ್ನು ಪ್ರಶಂಸಿದರು. ಅದರಲ್ಲೂ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಅಭಿನಂದಿಸಿದರು. “ಇಂದಿನ ವಿದ್ಯಾರ್ಥಿಗಳಿಗೆ ಜ್ಞಾನವು ಎಲ್ಲಾ ಕಡೆಯಿಂದ ಸಿಗುತ್ತದೆ, ಆದರೆ ಅದನ್ನು ಸೂಕ್ತ ಸಂದರ್ಭದಲ್ಲಿ ಬಳಸಿಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳಿಗೆ ಪ್ರಯೋಗ ಮತ್ತು ತಪ್ಪುಗಳಿಗೆ ಅವಕಾಶಗಳಿರುತ್ತವೆ, ಆದರೆ ವೃತ್ತಿ ಜೀವನಕ್ಕೆ ಬಂದ ಮೇಲೆ ಅದಕ್ಕೆ ಅವಕಾಶವಿರುವುದಿಲ್ಲ” ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್ ಅವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ವಾಣಿಜ್ಯ ಮತ್ತು ವ್ಯವಹಾರ ವಿಭಾಗದ ಮುಖ್ಯಸ್ಥರಾದ ಶಿಲ್ಪಶ್ರೀ ಅವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಚೈತನ್ಯ ಸ್ವಾಗತಿಸಿದರು. ಗಣಕಶಾಸ್ತ್ರದ ಉಪನ್ಯಾಸಕಿ ನಾಗಲಕ್ಷ್ಮಿ ವಂದಿಸಿದರು. ಗಣಕಶಾಸ್ತ್ರ ಉಪನ್ಯಾಸಕಿ ನಾಫಿಯಾ ಅಕ್ತಾರಿ ಬಹುಮಾನ ಪಟ್ಟಿಯನ್ನು ವಾಚಿಸಿದರು. ಕಾರ್ಯಕ್ರಮವನ್ನು ಆಂಗ್ಲ ಭಾಷೆಯ ಉಪನ್ಯಾಸಕಿ ರಾಜೇಶ್ವರಿ ಆರ್. ಶೆಟ್ಟಿ ನಿರೂಪಿಸಿದರು.

ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಾಹಿತ್ಯ, ಕಲೆ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು.

Exit mobile version