Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ಮೇಲ್‌ಗಂಗೊಳ್ಳಿ ಗಂಗೊಳ್ಳಿ ಇದರ 39ನೇ ವಾರ್ಷಿಕೋತ್ಸವ, ಅಮೃತಾ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್‌ಗಂಗೊಳ್ಳಿ ಇದರ 39ನೇ ವಾರ್ಷಿಕೋತ್ಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಮೇಲ್‌ಗಂಗೊಳ್ಳಿಯ ಪೋರ್ಟ್ ಬಂಗ್ಲೆ ಬಳಿ ಮಂಗಳವಾರ ನಡೆಯಿತು.

ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಖಾರ್ವಿ ಧ್ವಜಾರೋಹಣ ನೆರವೇರಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಗಂಗೊಳ್ಳಿ ಜೈ ಭೀಮ್ ಸಂಘಟನೆಯ ಪ್ರಧಾನ ಸಂಚಾಲಕ ಜಗದೀಶ ಗಂಗೊಳ್ಳಿ, ಬೈಂದೂರು ಯುವ ಬಂಟರ ಸಂಘದ ಅಧ್ಯಕ್ಷ ಗುರುರಾಜ್ ಶೆಟ್ಟಿ ಶುಭ ಹಾರೈಸಿದರು.

ಈ ಸಂದರ್ಭ ಸಮಾಜಸೇವಕ ಕೊತ್ವಾಲ್ ಪದ್ಮನಾಭ ಶೇರುಗಾರ್, ರಾಷ್ಟ್ರ ಮಟ್ಟದ ಕ್ರೀಡಾಪಟು ಕೀರ್ತನಾ ಎಸ್. ಕಿರಿಮಂಜೇಶ್ವರ, ಯಕ್ಷಗಾನ ಭಾಗವತ ಶಂಕರ ಬಾಳ್ಕುದ್ರು, 2025ರ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದ ಸುಶ್ಮಿತಾ ಎಸ್. ಗಾಣಿಗ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚಿಗೆ ನಿಧನರಾದ ಡಾ. ಗಣೇಶ ಗಂಗೊಳ್ಳಿ ಅವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿ.ಮೊಹಿದ್ದೀನ್ ಮೇಲ್‌ಗಂಗೊಳ್ಳಿ, ಯುವತಿ ಮಂಡಲದ ಅಧ್ಯಕ್ಷೆ ಶಕುಂತಲಾ, ಮಹಿಳಾ ಮಂಡಳಿ ಅಧ್ಯಕ್ಷೆ ಜ್ಯೋತಿ ಉಪಸ್ಥಿತರಿದ್ದರು.

ಯುವಕ ಮಂಡಲದ ಅಧ್ಯಕ್ಷ ನಾಗೇಶ ಸ್ವಾಗತಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷ ಭಾಸ್ಕರ ಎಚ್.ಜಿ. ಪ್ರಸ್ತಾವನೆಗೈದರು. ಯುವತಿ ಮಂಡಲದ ಕಾರ್ಯದರ್ಶಿ ಸರಸ್ವತಿ ವರದಿ ವಾಚಿಸಿದರು. ಕ್ರೀಡಾ ಕಾರ್ಯದರ್ಶಿ ಸಹನಾ ಕೆ. ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಚಿದಾನಂದ ಅವರು ಶೈಕ್ಷಣಿಕ ಸಾಧಕರನ್ನು ಪರಿಚಯಿಸಿದರು. ಉಪಾಧ್ಯಕ್ಷ ವಂದಿಸಿದರು. ವಿಶ್ವನಾಥ ಲೈಟ್‌ಹೌಸ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version