Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂಭಾಶಿ: ಹಳೇ ದ್ವೇಷದಿಂದ ಯುವಕನ ಮೇಲೆ ಸೋಡಾ ಬಾಟಲಿ ಹಾಗೂ ಹೆಲ್ಮೆಟ್‌ನಿಂದ ಹಲ್ಲೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ಏಳು ಜನರ ತಂಡ ಸೋಡಾ ಬಾಟಲಿ ಹಾಗೂ ಹೆಲ್ಮೆಟ್‌ನಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಕುಂಭಾಶಿಯ ಕೊರವಡಿ ಎಂಬಲ್ಲಿ ನಡೆದಿದೆ.

ತೆಕ್ಕಟ್ಟೆ ಗ್ರಾಮದ ರಂಜಿತ್ ಹಲ್ಲೆಗೊಳಗಾದವರು. ಸದ್ಯ ಇವರು ಗಂಭೀರ ಸ್ಥಿತಿಯಲ್ಲಿ ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೇ.17ರಂದು ರಾತ್ರಿ 10 ಗಂಟೆಯ ಸುಮಾರಿಗೆ ರಂಜಿತ್ ಅವರು ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಜೋರಾಗಿ ಮಳೆ ಬರುತ್ತಿದ್ದ ವೇಳೆ ಕುಂಭಾಶಿಯ ಕೊರವಡಿ ಬಳಿಯ ಅಂಗಡಿಯೊಂದರ ಎದುರು ತಮ್ಮ ಬೈಕ್ ನಿಲ್ಲಿಸಿ ಆಶ್ರಯ ಪಡೆದಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿಗಳಾದ ವಿಕಾಸ್ ಪೂಜಾರಿ, ಶರತ್ ಪೂಜಾರಿ, ಮಹೇಂದ್ರ ಪೂಜಾರಿ, ಸುಕೇಶ್ ಪೂಜಾರಿ, ಅಭಿಲಾಷ್ ಪೂಜಾರಿ, ಮಂಜುನಾಥ ಮತ್ತು ಸಂದೇಶ್ ಇವರು ಒಟ್ಟು ಸೇರಿ, ರಂಜಿತ್‌ನನ್ನು ಕೊಲ್ಲುವ ಉದ್ದೇಶದಿಂದ ಸೋಡಾ ಬಾಟಲಿ ಹಾಗೂ ಹೆಲ್ಮೇಟ್ನಿಂದ ಹಲ್ಲೆ ಮಾಡಿದ್ದಾರೆ.

ಹಲ್ಲೆ ನಡೆಸಿದ ಪರಿಣಾಮ ರಂಜಿತ್ ಅವರಿಗೆ ಗಂಭೀರ ಸ್ವರೂಪದ ರಕ್ತಗಾಯಗಳಾಗಿದ್ದವು. ವಿಷಯ ತಿಳಿದ ತಕ್ಷಣ ರಂಜಿತ್ ಅವರ ಸಹೋದರ ರಾಘವೇಂದ್ರ ಸ್ಥಳಕ್ಕೆ ಧಾವಿಸಿ, ತಕ್ಷಣಕ್ಕೆ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದರು.

ಆದರೆ ಮರುದಿನ (ಮೇ. 18) ಮುಂಜಾನೆ ರಂಜಿತ್ ಹಾಸಿಗೆಯಿಂದ ಏಳಲಾರದಷ್ಟು ಅಸ್ವಸ್ಥರಾಗಿದ್ದನ್ನು ಕಂಡು ಆತಂಕಗೊಂಡ ಕುಟುಂಬಸ್ಥರು ತಕ್ಷಣ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಂಜಿತ್ ಅವರ ಸ್ಥಿತಿಯನ್ನು ಪರೀಕ್ಷಿಸಿದ ವೈದ್ಯರು, ಸ್ಕ್ಯಾನಿಂಗ್ ಹಾಗೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆಯೆಂದು ಸೂಚಿಸಿದ್ದರಿಂದ ಸದ್ಯ ಅವರನ್ನು ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಹಳೆಯ ದ್ವೇಷ ಈ ಘಟನೆಗೆ ಪ್ರಮುಖ ಕಾರಣವಾಗಿರುವುದಾಗಿದೆ. ಗಾಯಾಳುವಿನ ಸಹೋದರ ರಾಘವೇಂದ್ರ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version