Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಅರಣ್ಯ ಇಲಾಖೆ ಸಿಬ್ಬಂದಿಗೆ ಜೀವ ಬೆದರಿಕೆ, ಆರೋಪಿ ಸೆರೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಸ್ತು ಅರಣ್ಯ ಪಾಲಕರೊಬ್ಬರಿಗೆ ಹಣದ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಅರಣ್ಯ ಇಲಾಖೆಯಲ್ಲಿ ಅರಣ್ಯ ಗಸ್ತು ಪಾಲಕನಾಗಿರುವ ಆನಂದ ಬಳೆಗಾರ್ ಕರ್ತವ್ಯದಲ್ಲಿರುವಾಗ ಕುಂದಾಪುರ ಸಂಗಂ ಜಂಕ್ಷನ್ ಸಮೀಪ ಸದಾಶಿವ ಕೋಟೆಕಾರ್ ಎಂಬವರು ಬೆದರಿಸಿ, ಹಣಕ್ಕೆ ಬೆದರಿಕೆ ಹಾಕಿರುವುದಾಗಿ ಆನಂದ ಬಳೆಗಾರ್ ದೂರು ನೀಡಿದ್ದಾರೆ.

ಆರೋಪಿ ಸದಾಶಿವನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮೇ.1ರಂದು ಆರೋಪಿಯು ತನ್ನ ಇಲಾಖಾ ಸಮವಸ್ತ್ರಕ್ಕೆ ಕೈ ಹಾಕಿ, ನಿಂದಿಸಿ, 25 ಸಾವಿರ ರೂ. ಕೊಡಬೇಕು. ಇಲ್ಲದಿದ್ದರೆ ಎಲ್ಲ ವಿಚಾರ ಪ್ರಚಾರ ಮಾಡುತ್ತೇನೆಂದು ಬೆದರಿಸಿದ್ದಾನೆ. ಮೇ 6ರಂದು ಅಡ್ಡಹಾಕಿ 25 ಸಾವಿರ ರೂ. ಕೊಡದಿದ್ದರೆ ನಿನ್ನ ಎಲ್ಲ ವ್ಯವಹಾರ ಮಾಹಿತಿ ಹಕ್ಕಿನಲ್ಲಿ ಪಡೆದು, ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಆನಂದ್ ದೂರಿನಲ್ಲಿ ತಿಳಿಸಿದ್ದಾರೆ. ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಸದಾಶಿವ ಕೋಟೆಕಾರ್ ಈ ಹಿಂದೆ ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕ ಜೀಪ್ ಚಾಲಕರಾಗಿ ಕಾರ್ಯನಿರ್ವಹಿಸಿದ್ದನು. ವೈಯಕ್ತಿಕ ದ್ವೇಷದ ಹಿನ್ನೆಲೆ ಈ ಕೃತ್ಯ ಎಸಗಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Exit mobile version