Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ಅಭಿಮುಖೀಕರಣ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಮಕ್ಕಳ ಸಾಧನೆಯಿಂದ ಹೆತ್ತವರಿಗೆ ಗೌರವ ಸಿಗುವಂತಾದರೆ ಅದು ನಿಜಕ್ಕೂ ಮಕ್ಕಳು ಹೆತ್ತವರಿಗೆ ನೀಡುವಂತಹ ಅತಿ ದೊಡ್ಡ ಉಡುಗೊರೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಪರಿಶ್ರಮ ಮತ್ತು ಶ್ರದ್ಧೆಯಿಂದ ಸಾಧನೆಗಳನ್ನು ಮಾಡಬೇಕು ಮತ್ತು ಗುರಿಯನ್ನು ತಲುಪಬೇಕು ಎಂದು ಗಂಗೊಳ್ಳಿಯ ಉದ್ಯಮಿ ವಾಮನ ಎಸ್. ಪೈ ಹೇಳಿದರು.

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿಯ ಆರಂಭೋತ್ಸವ ಮತ್ತು ಅಭಿಮುಖೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ವಿ. ಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶೀನಾಥ್ ಪಿ.ಪೈ, ಕಾಲೇಜಿನ ಕಾರ್ಯದರ್ಶಿ ಎನ್. ಸದಾಶಿವ ನಾಯಕ್ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರತಿಭೆಗಳಾದ ಅದಿತಿ ಎಸ್‌. ಖಾರ್ವಿ ಇವರಿಂದ ಭರತನಾಟ್ಯ ಮತ್ತು ಶ್ಯಾಮ್ ಜಿ.ಎನ್. ಪೂಜಾರಿ  ಅವರ ಕೊಳಲು ವಾದನ ಮತ್ತು ರಚಿತ್ ಚಂದ್ರ ಖಾರ್ವಿ ಅವರಿಂದ ತಬಲ ವಾದನ ಕಾರ್ಯಕ್ರಮ ನಡೆಯಿತು.

ಉಪನ್ಯಾಸಕರಾದ ಸುಜಯೀಂದ್ರ  ಹಂದೆ ಅತಿಥಿಗಳನ್ನು ಸ್ವಾಗತಿಸಿದರು. ನರೇಂದ್ರ ಎಸ್. ಗಂಗೊಳ್ಳಿ ಸಿಬ್ಬಂದಿಗಳನ್ನು ಪರಿಚಯಿಸಿದರು. ಎನ್.ಸಿ ವೆಂಕಟೇಶಮೂರ್ತಿ ಕಾಲೇಜಿನ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರಮೋದ ಪೈ.ಎಂ.ಜಿ ಕಚೇರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ತನಿಷಾ ಮತ್ತು ಶರಣ್ಯ ಪ್ರಾರ್ಥಿಸಿದರು. ಉಪನ್ಯಾಸಕಿ ಸುಪ್ರೀತಾ ಆಚಾರ್ಯ ನಿರೂಪಿಸಿ, ಉಪನ್ಯಾಸಕ ಥಾಮಸ್ ಪಿ.ಎ. ವಂದಿಸಿದರು.

Exit mobile version