ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಕೊಲ್ಲೂರಿಗೆ ತಾಲೂಕು ಕೇಂದ್ರದಿಂದ ಸರ್ಕಾರಿ ಬಸ್ ಸೌಲಭ್ಯ ಒದಗಿಸಲು ಈವರೆಗೆ ಸಾಧ್ಯವಾಗಿಲ್ಲ. ನಿರಂತರ ಮನವಿಯ ಹೊರತಾಗಿಯೂ ಅಧಿಕಾರಿಗಳು ತೆಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕೊಲ್ಲೂರು, ಹಳ್ಳಿಹೊಳೆ ಸೇರಿದಂತೆ ಗ್ರಾಮೀಣ ಭಾಗಗಳಿಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರಿ ಬಸ್ ಸೇವೆ ಅಗತ್ಯವಿದ್ದ ತುರ್ತು ಕ್ರಮಕ್ಕಾಗಿ ಆಗ್ರಹಿಸಲಾಗುವುದು ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಹೇಳಿದರು.
ಅವರು ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸದಸ್ಯರಾದ ಪ್ರಭಾಕರ ನಾಯ್ಕ್ ಹಾಗೂ ರಾಘವೇಂದ್ರ ಪೂಜಾರಿ ಅವರ ಪ್ರಶ್ನೆಗೆ ಉತ್ತರಿಸಿದರ ಅವರು, ಹಲವು ಮಾರ್ಗಗಳಲ್ಲಿ ಪರ್ಮಿಟ್ ಹೊಂದಿದ್ದರೂ ಕೆಎಸ್ಆರ್ ಟಿಸಿ ಬಸ್ ಸೇವೆಯನ್ನು ಸ್ಥಗೀತಗೊಳಿಸಿ ತಾಲೂಕು ವ್ಯಾಪ್ತಿಯ ಗ್ರಾಮೀಣ ಭಾಗಗಳ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಎರಡೆರಡು ಭಾರಿ ಸಭೆ ನಡೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಪಂಚಾಯತ್ ಸಿಇಓ ಅವರು ಕೋರ್ಟ್ ತಡೆ ಇರುವ ಮಾರ್ಗಗಳಿಗೆ ಪರ್ಯಾಯ ಸಲಹೆ ನೀಡಿದ್ದರೂ ಅದರ ಪಾಲನೆಯಾಗಿಲ್ಲ ಇದರ ಹಿಂದೆ ಖಾಸಗಿ ಲಾಭಿ ಅಡಗಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಮೃತಪಟ್ಟಿದ್ದಲ್ಲಿ ಅಂತವರ ಖಾತೆಗೆ ಹಣೆ ವರ್ಗಾವಣೆಯಾಗುವುದನ್ನು ತಕ್ಷಣ ನಿಲ್ಲಿಸಬೇಕಿದೆ. ಹಣ ದುರ್ಬಳಕೆ ತಡೆದು ನೈಜ ಫಲಾನುಭವಿಗೆ ಯೋಜನೆಯ ಹಣ ದೊರೆಯುವಂತೆ ಮಾಡಬೇಕಿದೆ. ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ ಇಲಾಖೆ ಕಾಲಕಾಲಕ್ಕೆ ಆಯಾ ಪಂಚಾಯತಿಯಿಂದ ಮಾಹಿತಿ ಪಡೆದು ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸುವಂತೆ ಸೂಚಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಮಾಲತಿ ಶಿವಾನಂದ, ಅನೀಶ್ ಪೂಜಾರಿ, ಸೂರ್ಯಕಾಂತಿ ದೇವದಾಸ್ ವಿ.ಜೆ., ಬಾಬು ದೇವಾಡಿಗ, ಮುಕ್ರಿ ಮೊಹಮ್ಮದ್ ಅಲ್ತಾಫ್, ಪ್ರಭಾಕರ ನಾಯ್ಕ್, ಅಪ್ಪಣ್ಣ ಶೆಟ್ಟಿ, ರಾಘವೇಂದ್ರ ಬಿಲ್ಲವ, ರಾಮ ಪೂಜಾರಿ, ರಾಮಚಂದ್ರ ಖಾರ್ವಿ, ಮೆಸ್ಕಾಂ, ಕೆಎಸ್ಆರ್ಟಿಸಿ, ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.