Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳಿಂದ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಗೆ ಅಧ್ಯಯನ ಭೇಟಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯಕ್ಷಗಾನ ಸಂಘ ಹಾಗೂ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಉಪ್ಪಿನಕುದ್ರು ಯಕ್ಷಗಾನ ಗೊಂಬೆಯಾಟ ರಂಗಭೂಮಿಗೆ ವಿದ್ಯಾರ್ಥಿಗಳು ಅಧ್ಯಯನ ಭೇಟಿ ನಡೆಸಿದರು.

ಉಪ್ಪಿನಕುದ್ರು ದೇವಣ್ಣ ಪದ್ಮನಾಭ ಕಾಮತ್ ಸ್ಮಾರಕ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ನ ಅಧ್ಯಕ್ಷರಾದ ಭಾಸ್ಕರ ಕೊಗ್ಗ ಕಾಮತ್ ಅವರು ವಿದ್ಯಾರ್ಥಿಗಳಿಗೆ ಗೊಂಬೆಯಾಟ ಕುರಿತು ವಿಸ್ತೃತ ಮಾಹಿತಿ ನೀಡಿದರು. ಕರ್ನಾಟಕದ ಜನಪದ ಕಲಾಪರಂಪರೆಯಲ್ಲಿ ಯಕ್ಷಗಾನ ಗೊಂಬೆಯಾಟವು ವಿಶಿಷ್ಟ ಹಾಗೂ ಅಪರೂಪದ ಸ್ಥಾನವನ್ನು ಪಡೆದಿದೆ. ಸುಮಾರು 12ನೇ ಶತಮಾನದಿಂದಲೇ ಈ ಕಲೆ ಆರಂಭವಾಗಿದೆ ಎಂದು ಹೇಳಲಾಗುತ್ತದೆ.

ಈ ಕಲೆ ಕೇವಲ ಮನರಂಜನೆಯ ಸಾಧನವಲ್ಲ; ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಜೀವನ ಸತ್ವವನ್ನು ಪ್ರತಿಬಿಂಬಿಸುವ ಅದ್ಭುತ ಕಲಾ ರೂಪವಾಗಿದೆ. ಕಳೆದ 350 ವರ್ಷಗಳಿಂದಲೂ ತೀರ ಅಳಿವಿನಂಚಿನಲ್ಲಿರುವ ಗೊಂಬೆಯಾಟ ಕಲೆಯನ್ನು ನಿರಂತರವಾಗಿ ಆರು ತಲೆಮಾರುಗಳಿಂದ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಹಾಗೂ ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ಮೂಲಕ ಈ ಸತ್ಕಾರ್ಯದಲ್ಲಿ ತೊಡಗಿದ್ದೇವೆ ಎಂದರು.

ಗೊAಬೆಗಳ ತಯಾರಿಕೆಯಲ್ಲಿ ಕೂಡ ವಿಶಿಷ್ಟ ನೈಪುಣ್ಯತೆಯನ್ನು ಹೊಂದಿದ ಭಾಸ್ಕರ್ ಕಾಮತ್‌ರು ಪಾರಂಪರಿಕ ಮರದ ಗೊಂಬೆಗಳ ಜೊತೆಗೆ ಗಿಳಿ, ಮರಕುಟಿಗ, ನವಿಲು ಮೊದಲಾದ ಹೊಸ ವಿನ್ಯಾಸದ ಗೊಂಬೆಗಳನ್ನು ತಯಾರಿಸುತ್ತಿರುವ ಬಗ್ಗೆ ಹಾಗೂ ಗೊಂಬೆಗಳಿಗೆ ಬಳಸುವ ಬೇಗಡೆಗೆ ವಿಶೇಷ ಹೊಳಪು ಹಾಗೂ ದೀರ್ಘಕಾಲಿಕ ಮೆರುಗು ಬರಲು ಜೇನು ಮೇಣ ಹಾಗೂ ಹಲಸಿನ ಮೇಣವನ್ನು ಮಿಶ್ರಣ ಮಾಡಿ ಬಳಸಲಾಗುತ್ತದೆ ಎಂದರು. ಸಾಮಾನ್ಯವಾಗಿ ಮರದಿಂದ ನಿರ್ಮಿಸಲ್ಪಟ್ಟ ಈ ಗೊಂಬೆಗಳು ಕಲಾವಿದರ ಕೈಚಳಕದಿಂದ ಜೀವಂತ ಪಾತ್ರಗಳಂತೆ ಕಾಣುತ್ತದೆ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.

ಯಕ್ಷಗಾನದ ಹೆಜ್ಜೆಗಳು, ನೃತ್ಯ ಭಂಗಿಗಳು ಹಾಗೂ ಅಭಿನಯವನ್ನು ಸೂತ್ರಗಳ ಆಧಾರದಲ್ಲಿ ಗೊಂಬೆಗಳ ಮೂಲಕ ಹೇಗೆ ಪ್ರದರ್ಶಿಸಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು. ವಿದ್ಯಾರ್ಥಿಗಳಿಗೆ ಸ್ವತ: ಗೊಂಬೆಗಳನ್ನು ನೀಡಿ ಅವುಗಳನ್ನು ಹೇಗೆ ಕುಣಿಸಬಹುದು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.

ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಮಾಹಿತಿ ಪಡೆದ ವಿದ್ಯಾರ್ಥಿಗಳು ನಂತರ ಮ್ಯೂಸಿಯಂಗೆ ಭೇಟಿ ನೀಡಿ ಅಲ್ಲಿ ಇರುವ ಹಳೆಯ ಕಾಲದ ಪಾರಂಪರಿಕ ಯಕ್ಷಗಾನ ಗೊಂಬೆಗಳು, ದೇಶ-ವಿದೇಶಗಳಲ್ಲಿ ಪಡೆದ ಪ್ರಶಸ್ತಿ ಹಾಗೂ ಸನ್ಮಾನಗಳನ್ನು ವೀಕ್ಷಿಸಿದರು. ಇದೇ ಸಂದರ್ಭ ಅವರು ಪ್ರತಿ ತಿಂಗಳು ಪ್ರತಿಭಾವಂತರಿಗೆ ವೇದಿಕೆಯನ್ನು ಒದಗಿಸುವ ಮೂಲಕ ಹೊಸ ಕಲಾವಿದರನ್ನು ಪ್ರೋತ್ಸಾಹಿಸುವ ಬಗ್ಗೆ ತಿಳಿಸಿದರು. ಅಪರೂಪದ ಗೊಂಬೆಯಾಟ ಕಲೆಯನ್ನು ಉಳಿಸಲು ದೊಡ್ಡ ಮಟ್ಟದ ನೆರವನ್ನು ನೀಡುತ್ತಿರುವ ಇನ್ಫೋಸಿಸ್ ಫೌಂಡೇಶನ್ ಡಾ. ಸುಧಾ ಮೂರ್ತಿ ಹಾಗೂ ಇತರರ ಸಹಕಾರವನ್ನು ಸ್ಮರಿಸಿದರು.

ಅಧ್ಯಯನ ಭೇಟಿಯ ಸಂದರ್ಭ ಗೀತಾಂಜಲಿ ಭಾಸ್ಕರ್ ಕಾಮತ್, ಕಾಲೇಜಿನ ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ, ಯಕ್ಷಗಾನ ಸಂಘದ ಸಂಯೋಜಕರಾದ ರಶ್ಮಿತಾ ಶೆಟ್ಟಿ ಮತ್ತು ಮಹೇಶ್ ಪೂಜಾರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version