Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ರಕ್ತದಾನ ಮಾಡುವುದು ಪುಣ್ಯದ ಕಾರ್ಯ. ಇಂದಿನ ಈ ರಜಾದಿನಗಳಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಿದೆ. ಕುಂದಾಪುರ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದಲ್ಲಿ ಪ್ರತಿನಿತ್ಯ 20-25 ಯೂನಿಟ್ ರಕ್ತದ ಬೇಡಿಕೆ ಇದೆ. ರಕ್ತದ ಬೇಡಿಕೆ ಹೆಚ್ಚಿದೆ ಜೊತೆಗೆ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ಕೂಡ ಇದೆ. ಒಂದು ಯೂನಿಟ್ ರಕ್ತ ದಾನ ಮಾಡುವುದರಿಂದ ಮೂರು ಜೀವ ಉಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಪುಣ್ಯದ ಕೆಲಸದಲ್ಲಿ ಕೈಜೋಡಿಸಬೇಕು ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಘಟಕದ ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ್ ಹೇಳಿದರು.

ಅವರು ಯಕ್ಷಾಭಿಮಾನಿ ರಕ್ತದಾನಿಗಳ ಬಳಗ ಗಂಗೊಳ್ಳಿ ಇದರ 17ನೇ ವರ್ಷದ ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಪ್ರಯುಕ್ತ ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಗಂಗೊಳ್ಳಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ರಕ್ತನಿಧಿ ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಭಾನುವಾರ ಜರಗಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ಅಧ್ಯಕ್ಷ ರಾಮಪ್ಪ ಖಾರ್ವಿ ಶಿಬಿರವನ್ನು ಉದ್ಘಾಟಿಸಿದರು. ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಜಿ. ವಿಶ್ವನಾಥ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ರಕ್ತದಾನಿ ದೇವದಾಸ ಪಾಟ್ಕರ್ ಅವರನ್ನು ಸಮ್ಮಾನಿಸಲಾಯಿತು. ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವೈಷ್ಣವಿ ಖಾರ್ವಿ ಅವರನ್ನು ಗೌರವಿಸಲಾಯಿತು.

ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಅಧ್ಯಕ್ಷ ಸತೀಶ್ ಸಾಲಿಯಾನ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ತ್ರಾಸಿ ಗ್ರಾಪಂ ಮಾಜಿ ಅಧ್ಯಕ್ಷ ಮಿಥುನ್ ಬಿಜೂರು, ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆ ಪ್ರಬಂಧಕ ವಾಸು ದೇವಾಡಿಗ, ಗಂಗೊಳ್ಳಿ ಗ್ರಾಪಂ ಸದಸ್ಯ ಚಂದ್ರ ಖಾರ್ವಿ, ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್, ಯಕ್ಷಾಭಿಮಾನಿ ರಕ್ತದಾನಿಗಳ ಬಳಗದ ಅಶೋಕ ಎನ್.ಡಿ., ಚರಣ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version