Site icon Kundapra.com ಕುಂದಾಪ್ರ ಡಾಟ್ ಕಾಂ

ಬದುಕಿನಲ್ಲಿ ನಿಷ್ಠೆ ಇದ್ದಲ್ಲಿ ಯಶಸ್ವಿ ಉದ್ಯಮ ಸಾಧ್ಯ: ಅಬೀದ್ ಗದ್ಯಾಳ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬ್ರಹ್ಮಾವರ:
ಇಂದು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕನ್ನು ರೂಪಿಸಲು ರುಡ್‌ಸೆಟ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ಹಾಗಾಗಿ ಬದುಕಿನಲ್ಲಿ ನಿಷ್ಠೆ ಇದ್ದಲ್ಲಿ ಯಶಸ್ವಿ ಉದ್ಯಮ ಸಾಧ್ಯ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅಭಿಪ್ರಾಯಪಟ್ಟರು.

ಅವರು ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಉಡುಪಿ, ಜಿಲ್ಲಾ ಕಾರಾಗೃಹ, ಹಿರಿಯಡ್ಕ ಮತ್ತು ರುಡ್‌ಸೆಟ್ ಸಂಸ್ಥೆ, ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ 06 ದಿನಗಳ ಕಾಲ ನಡೆಯುವ ಉಡುಪಿ ಜಿಲ್ಲೆಯ ಕಾರಾಗೃಹ ಜೈಲುವಾಸಿಗಳಿಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಜೈಲುವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು.

ಅವರು ಉದ್ಯಮದಲ್ಲಿ ಉನ್ನತ ಮಟ್ಟದ ಸಾಧಿಸಲು ಉದ್ಯಮದ ಕುರಿತು ನಿಷ್ಠೆ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಅದರಲಿ ಬೆಳವಣಿಗೆ ಹೊಂದಬಹುದು. ಉದ್ಯಮದಲ್ಲಿ ತೊಡಗುವಾಗ ಅದಕ್ಕೆ ತಕ್ಕುದಾದ ರಿಸ್ಕ್ಅನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಇನ್ನಷ್ಟು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಜೊತೆಗೆ ಹಂತ ಹಂತವಾಗಿ ಉದ್ಯಮ ಬೆಳೆಯುತ್ತದೆ ಎಂದು ಹೇಳಿ ಶುಭ ಹಾರೈಸಿದರು.

ಕೆನರಾ ಬ್ಯಾಂಕ್‌ನ ವೃತ್ತ ಕಛೇರಿಯ ಮಹಾ ಪ್ರಬಂಧಕರಾದ ಗಂಗಾಧರ ಹೆಚ್.ಕೆ. ಮಾತನಾಡಿ, ನಾನು ಅವನಲ್ಲ ಎಂಬ ಮನೋಭಾವನೆಯಿಂದ ಹೊರಬಂದು ಸಮಾಜದಲ್ಲಿ ಎಲ್ಲರ ಜೊತೆ ಒಳ್ಳೆಯ ಜೀವನ ಮಾಡಬೇಕೆಂದ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಉಡುಪಿ ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ವಿಜಯಕುಮಾರ ಡಿ. ಚವ್ಹಾಣ್ ಮಾತನಾಡಿ, ಈ ಮುಂದಿನ ಜೀವನದಲ್ಲಿ ಯಶಸ್ವಿ ಉದ್ಯಮಿಯಾಗಿ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾದ ಉಡುಪಿ ಜಿಲ್ಲೆಯ ಲೀಡ್ ಡಿಸ್ಟೀಕ್ಟ್ ಮ್ಯಾನೇಜರ್ ಹರೀಶ ಜಿ. ಮಾತನಾಡಿ, ಬ್ಯಾಂಕಿನಿಂದ ಸೀಗುವ ಸಾಲ- ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾದ ಉಡುಪಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಅರುಣ್ ಬಿ, ಬದುಕಿನಲ್ಲಿ ಛಲವಿದ್ದರೆ ನಾವು ಎಲ್ಲಿ ಬೇಕಾದರೂ ಜೀವನ ಕಟ್ಟಿಕೊಳ್ಳಬಹುದು ಎಂದು ಶುಭ ಹಾರೈಸಿದರು.

ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಮ್ ತರಬೇತಿಯಲ್ಲಿ ಪಡೆದ ಕೌಶಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳಿ ಎಂದು ಶುಭ ಹಾರೈಸಿದರು.

ಕಛೇರಿ ಸಹಾಯಕ ಶಾಂತಪ್ಪ ನಿರೂಪಿಸಿ, ಜಿಲ್ಲಾ ಕಾರಾಗೃಹದ ಸಿಬ್ಬಂದಿ ಆದ ರೇಷ್ಮಾ ನಾಯಕ್ ಸ್ವಾಗತಿಸಿ, ಹಿರಿಯ ಕಛೇರಿ ಸಹಾಯಕರಾದ ಶ್ರುತಿ ಪಿ. ಕುಮ್ಟಾಕರ್ ವಂದಿಸಿದರು.

Exit mobile version