ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಪುನರ್ಜನ್ಮ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರದಲ್ಲಿ ಜುಲೈ 4ರಿಂದ 13ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಮಹಿಳಾ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಮಾಲೋಚನಾ ಸಭೆ ಮೂಡುಬಿದಿರೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್ ಇತ್ತೀಚಿನ ದಿನಗಳಲ್ಲಿ ಮದ್ಯ, ಮಾದಕ ವಸ್ತುಗಳು ಹಾಗೂ ಇತರ ವ್ಯಸನಗಳ ಬಲೆಗೆ ಮಹಿಳೆಯರೂ ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆ. ವ್ಯಸನವು ವ್ಯಕ್ತಿಯ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಸ್ವಾಸ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಹಿಳೆ ದಾರಿ ತಪ್ಪಿದರೆ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಮಹಿಳೆಯರಲ್ಲಿ ಜಾಗೃತಿ ಮೂಡಿಸಿ, ವ್ಯಸನಮುಕ್ತ ಬದುಕಿನತ್ತ ಕೊಂಡೊಯ್ಯುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಲಕ ಇದುವರೆಗೆ ಸುಮಾರು 1.5 ಲಕ್ಷಕ್ಕೂ ಅಧಿಕ ಮಂದಿ ವಿವಿಧ ವ್ಯಸನಗಳಿಂದ ಮುಕ್ತರಾಗಿದ್ದು, ಸಾವಿರಾರು ಕುಟುಂಬಗಳಲ್ಲಿ ಹೊಸ ಬದುಕಿನ ಆಶಾಕಿರಣ ಮೂಡಿದೆ. ಮಹಿಳೆಯರಿಗಾಗಿ ವಿಶೇಷವಾಗಿ ಆಯೋಜಿಸಲಾಗುತ್ತಿರುವ ಈ ಶಿಬಿರವು ಸಂಪೂರ್ಣ ವಸತಿ ಸಹಿತ ಪುನರ್ವಸತಿ ಶಿಬಿರವಾಗಿದ್ದು, ಪರಿಣತ ವೈದ್ಯರು ಹಾಗೂ ಮನೋವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಮತ್ತು ಸಲಹಾ ಸೇವೆಗಳನ್ನು ಒದಗಿಸಲಾಗುವುದು ಎಂದರು.
ಶಿಬಿರದ ವಿಶೇಷತೆಗಳು:
ಶಿಬಿರದಲ್ಲಿ ಮನೋವೈದ್ಯಕೀಯ, ಸ್ತ್ರೀರೋಗ, ದಂತ, ಶ್ವಾಸಕೋಶ, ನೇತ್ರ, ಚರ್ಮ, ನರರೋಗ, ಪೌಷ್ಟಿಕಾಂಶ ಸೇರಿದಂತೆ ವಿವಿಧ ವಿಭಾಗಗಳ ಸಮಗ್ರ ವೈದ್ಯಕೀಯ ತಪಾಸಣೆ ನಡೆಯಲಿದೆ. ಅಗತ್ಯವಿರುವವರಿಗೆ ಡಿಟಾಕ್ಸ್ ಹಾಗೂ ವ್ಯಸನಮುಕ್ತಿ ಚಿಕಿತ್ಸೆ, ಇತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯ ಜೊತೆಗೆ ವೈಯಕ್ತಿಕ ಸಮಾಲೋಚನೆ, ಮಾನಸಿಕ ಆರೋಗ್ಯ ಶಿಕ್ಷಣದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯೋಗ, ಧ್ಯಾನ, ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಹೋಮಿಯೋಪಥಿ ಚಿಕಿತ್ಸೆಗಳೊಂದಿಗೆ ಸಮಗ್ರ ಆರೋಗ್ಯ ಪುನಶ್ಚೇತನ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಹೊಲಿಗೆ, ಬ್ಯೂಟಿಷಿಯನ್ ಸೇರಿದಂತೆ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗಳ ಪರಿಚಯಾತ್ಮಕ ಅಧಿವೇಶನಗಳನ್ನು ಆಯೋಜಿಸಲಾಗಿದ್ದು, ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡಲಾಗುವುದು.
ಶಿಬಿರದ ಅವಧಿಯಲ್ಲಿ ಭಜನೆ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಒಳಾಂಗಣ ಕ್ರೀಡೆಗಳು, ವಿವಿಧ ಚಟುವಟಿಕೆಗಳು ಹಾಗೂ ಸ್ಪರ್ಧೆಗಳು ನಡೆಯಲಿವೆ. ಭಾಗವಹಿಸುವವರಿಗೆ ಆಹಾರ, ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ವೈದ್ಯಕೀಯ ಕಾಲೇಜಿನ ಡೀನ್ ಡಾ. ಮಹಾಬಲ ಶೆಟ್ಟಿ, ಮಹಿಳಾ ಮದ್ಯವರ್ಜನ ಶಿಬಿರದ ಯಶಸ್ಸಿನ ಪ್ರಮುಖ ಅಂಶಗಳಲ್ಲಿ ಗೌಪ್ಯತೆ ಅತ್ಯಂತ ಮಹತ್ವದ್ದಾಗಿದೆ. ವ್ಯಸನದ ಸಮಸ್ಯೆಯಿಂದ ಬಳಲುತ್ತಿರುವ ಅನೇಕ ಮಹಿಳೆಯರು ಸಾಮಾಜಿಕ ಕಳಂಕ, ಕುಟುಂಬದ ಒತ್ತಡ ಹಾಗೂ ಸಾರ್ವಜನಿಕ ಅಭಿಪ್ರಾಯದ ಭಯದಿಂದ ತಮ್ಮ ಸಮಸ್ಯೆಯನ್ನು ಬಹಿರಂಗಪಡಿಸಲು ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಶಿಬಿರಾರ್ಥಿಗಳ ವೈಯಕ್ತಿಕ ಮಾಹಿತಿ, ಆರೋಗ್ಯ ಸಂಬಂಧಿತ ವಿವರಗಳು ಹಾಗೂ ಸಮಾಲೋಚನಾ ಪ್ರಕ್ರಿಯೆಯಲ್ಲಿ ಹಂಚಿಕೊಳ್ಳುವ ವಿಷಯಗಳನ್ನು ಸಂಪೂರ್ಣ ಗೌಪ್ಯವಾಗಿ ಇಡಲಾಗುವುದು ಎಂದರು.
ಪುನರ್ಜನ್ಮದ ಆಪ್ತ ಸಮಾಲೋಚಕಿ ಸುಮನ್ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಹಲವು ವರ್ಷಗಳಿಂದ ಶಿಕ್ಷಣ, ಆರೋಗ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಜಾಗೃತಿ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದೆ. ಈ ಸಾಮಾಜಿಕ ಬದ್ಧತೆಯ ಭಾಗವಾಗಿರುವ ಆಳ್ವಾಸ್ ಪುನರ್ಜನ್ಮ –ಪ್ರೈಮ್ ಸೆಂಟರ್ ಫಾರ್ ಸೈಕಲಾಜಿಕಲ್ ಮೆಡಿಸಿನ್ ಕಳೆದ ಆರು ವರ್ಷಗಳಿಂದ ಮಾನಸಿಕ ಆರೋಗ್ಯ, ವ್ಯಸನಮುಕ್ತಿ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದೆ. ಮಹಿಳೆಯರ ಆರೋಗ್ಯ, ಸುರಕ್ಷತೆ ಮತ್ತು ಗೌರವವನ್ನು ಗಮನದಲ್ಲಿಟ್ಟುಕೊಂಡು ಜುಲೈ 4 ರಿಂದ 13ರವರೆಗೆ ವಿಶೇಷ ಮಹಿಳಾ ವ್ಯಸನಮುಕ್ತಿ ಶಿಬಿರ ಹಾಗೂ ಪ್ರತ್ಯೇಕ ಡಿ-ಅಡಿಕ್ಷನ್ ವಾರ್ಡ್ ಆರಂಭಿಸುವ ಮಹತ್ವದ ಯೋಜನೆಯನ್ನು ಕೂಡ ಕೈಗೆತ್ತಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಡುಬಿದಿರೆ ವಲಯದ ವಾಸುದೇವ ನಾಯ್ಕ, ಪ್ರಮುಖರಾದ ಸುಭಾಶ್ಚಂದ್ರ ಚೌಟ, ಬಾಹುಬಲಿ ಪ್ರಸಾದ ಇದ್ದರು. ಮೂಡುಬಿದಿರೆ ವಲಯ ಯೋಜನಾಧಿಕಾರಿ ಧನಂಜಯ ವಂದಿಸಿ, ಯೋಜನಾಧಿಕಾರಿ ಗಣೇಶ್ ಆಚಾರ್ಯ ನಿರೂಪಿಸಿದರು.

