Kundapra.com ಕುಂದಾಪ್ರ ಡಾಟ್ ಕಾಂ

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು  ನವಯಾನ – ಸಂಕಲ್ಪದಿಂದ ಸಾಧನೆಯಡೆಗೆ ಎಂಬ ಅಭಿಧಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ತರಗತಿಗಳನ್ನು ತೋರಣ, ದೀಪ, ವಿವಿಧ ಭಿತ್ತಿಚಿತ್ರಗಳಿಂದ ಅಲಂಕರಿಸಿ ತರಗತಿ ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಮೊದಲ ದಿನವೇ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವ ಸಲುವಾಗಿ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ  ಶರಣ ಕುಮಾರ ಅವರು ಮಾತನಾಡಿ, ಮಕ್ಕಳೇ, ಜ್ಞಾನವೆಂಬುದು ಇಂದು ಸಾವಿರಾರು ಮಾರ್ಗಗಳ ಮೂಲಕ ಸಂಪಾದಿಸಬಹುದಾಗಿದೆ. ಮೊಬೈಲ್‌ನ ಸಹಾಯದಿಂದ, ಕೃತಕ ಬುದ್ಧಿಮತ್ತೆಗಳಿಂದ ವಿದ್ಯೆಯನ್ನು ಸಂಪಾದಿಸಬಹುದಾಗಿದೆ. ಆದರೂ ಶಾಲೆಗೆ ಬಂದು ಅಧ್ಯಯನ ನಡೆಸುವ ಅನಿವಾರ್ಯತೆ ಇದ್ದೇ ಇದೆ. ಪದಗಳಿಗೆ ಬೇರೆ ಬೇರೆ ಅರ್ಥಗಳಿದ್ದರೂ ಯಾವ ಅರ್ಥವನ್ನು ಯಾವಾಗ ತಿಳಿಯಬೇಕೆಂಬ ಅನುಭವ ಶಾಲೆಯ ಮೂಲಕ ಆಗುತ್ತದೆ ಎಂದರು.

ಸಮಾಜದಲ್ಲಿ ಎಲ್ಲರೊಂದಾಗಿ ಬದುಕುವ ನಾಜೂಕತೆಯನ್ನು ಅರಿಯಲು ಶಾಲೆ ಅತ್ಯಗತ್ಯ. ಅರಿತ ಜ್ಞಾನವನ್ನು ಎಲ್ಲಿ ಯಾವ ರೀತಿಯಲ್ಲಿ ಬಳಸಬೇಕೆಂಬ ಸಾಮಾನ್ಯ ಜ್ಞಾನ  ಶಾಲೆಗಳಿಂದಲೇ ಪಡೆಯಲು ಸಾಧ್ಯ. ಮಕ್ಕಳ ಒಂಟಿತನವನ್ನು ದೂರ ಮಾಡಿ, ಮಿತ್ರರೊಡನೆ ಆಡಿ, ಹಾಡಿ, ನೆಮ್ಮದಿಯನ್ನು ಪಡೆಯಲು ಶಾಲೆ ಅತ್ಯಗತ್ಯ.  ಸೋಲು ಗೆಲುವುಗಳನ್ನು ಪಡೆಯುತ್ತಾ, ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ, ಸಾಧನೆಯ ಮೆಟ್ಟಿಲುಗಳನ್ನು ಏರಬೇಕಾದರೆ ಶಾಲಾಜೀವನ ಸಹಾಯಕ. ಹೀಗೆ ಜೀವನವನ್ನು ಬೆಳಗಿಸುವ ಶಾಲೆಗೆ ಆಗಮಿಸಿ, ನಿಮ್ಮ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳತಕ್ಕ ಮುಂದಿನ ಭಾರತದ ದಿವ್ಯಪ್ರತಿಭೆಗಳಿಗೆ ಈ ಶಾಲೆ ನೆಮ್ಮದಿಯ ಗುರುಕುಲ. ಎನ್ನುತ್ತಾ ಮಕ್ಕಳಿಗೆ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಅಧ್ಯಾಪಕ ವೃಂದವನ್ನು ಪರಿಚಯಿಸಿದರು.

ಶಾಲೆಯ ಸಹಸಂಯೋಜಕರಾದ ಲತಾ ದೇವಾಡಿಗ, ಶ್ರೀಮಧು ಕೆ. ಎಲ್, ಶಿಕ್ಷಕರಾದ ಗಣೇಶ ದೇವಾಡಿಗ, ಶಿಕ್ಷಕಿಯರಾದ ದೇವಿಕಾ, ಶ್ರೀಮತಿ ಬೇಬಿ ಎಸ್ ನಾಯಕ್, ಮಧುರಾ ಹೆಗಡೆ, ಸರಿತಾ ಶೆಟ್ಟಿ, ಸಂಗೀತಾ ಕೆ. ಆರ್,   ತಮ್ಮ ಸುಶ್ರಾವ್ಯವಾದ ಗಾಯನದ ಮೂಲಕ ಮುಂದಿನ ಕಲಿಕೆಗೆ ಮಕ್ಕಳಿಗೆ ಸ್ಫೂರ್ತಿ ನೀಡಿದರು. ವಿದ್ಯಾರ್ಥಿಗಳ ಸಮೂಹ ನೃತ್ಯ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿತು.

ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್. ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಶಾಲಾ ಶೈಕ್ಷಣಿಕ ಸಲಹೆಗಾರರಾದ ಸುಜಾತಾ ಸದಾರಾಮ್, ಶಾಲೆಯ ಸಹಸಂಯೋಜಕರಾದ ಸವಿತಾ ಭಟ್, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Exit mobile version