ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ (PMGDY) ಅಡಿಯಲ್ಲಿ ಸುಲಭವಾಗಿ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಬರೋಬ್ಬರಿ 5,69,069 ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ.
ತಾಲೂಕಿನ ಕಸಬ ಗ್ರಾಮದ ಕೆಳ ಖಾರ್ವಿಕೇರಿ ಡೋಗಿ ಪೇರಿ ರಸ್ತೆ ನಿವಾಸಿ ಪ್ರಣೀತ ಎಂಬುವರು ವಂಚನೆಗೊಳಗಾದ ಮಹಿಳೆ.
ಅವರು ಕಳೆದ ಮಾರ್ಚ್ 10 ರಂದು ತಮ್ಮ ಮೊಬೈಲ್‌ನಲ್ಲಿ ಫೇಸ್‌ಬುಕ್ ಬಳಸುತ್ತಿದ್ದಾಗ, ‘PMGDY ಅಡಿಯಲ್ಲಿ ಲೋನ್ ಕೊಡಿಸಲಾಗುವುದು’ ಎಂಬ ಜಾಹೀರಾತು ಕಂಡುಬಂದಿತ್ತು. ಸಾಲದ ಅವಶ್ಯಕತೆ ಇದ್ದಲ್ಲಿ 7082732342 ಸಂಖ್ಯೆಗೆ ಕರೆ ಮಾಡುವಂತೆ ಅದರಲ್ಲಿ ಸೂಚಿಸಲಾಗಿತ್ತು. ಅದರಂತೆ ಪ್ರಣೀತ ಅವರು ಸದರಿ ನಂಬರ್‌ಗೆ ಕೃಷ್ಣ ಮಾಡಿದಾಗ, ಆ ಕಡೆಯಿಂದ ಮಾತನಾಡಿದ ವ್ಯಕ್ತಿ ತನ್ನ ಹೆಸರು ‘ಶ್ರೀನಿವಾಸ್ ರಾವ್ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ ಪ್ರಣೀತ ಅವರಿಗೆ 40 ಲಕ್ಷ ರೂಪಾಯಿ ಲೋನ್ ಕೊಡಿಸುವುದಾಗಿ ನಂಬಿಸಿದ್ದಾನೆ.
ಫೋನ್ ಪೇ ಮೂಲಕ ಲಕ್ಷಾಂತರ ಹಣ ವರ್ಗಾವಣೆ:
ಸಾಲದ ಹಣ ಮಂಜೂರು ಮಾಡಲು ಮೊದಲು ಪ್ರೊಸೆಸಿಂಗ್ ಫೀಸ್ ಹಾಗೂ ಇನ್ನಿತರ ಖರ್ಚುಗಳಿಗೆ ಹಣ ಪಾವತಿಸಬೇಕೆಂದು ಆರೋಪಿ ಶ್ರೀನಿವಾಸ್ ರಾವ್ ನಂಬಿಸಿದ್ದಾನೆ. ಇದನ್ನು ನಿಜವೆಂದು ನಂಬಿದ ಪ್ರಣೀತ ಅವರು ಮಾ.11 ರಿಂದ ಮಾ.13 ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 5,69,069 ರೂಪಾಯಿ ಹಣವನ್ನು ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗೆ ಫೋನ್ ಪೇ (PhonePe) ಮೂಲಕ ವರ್ಗಾವಣೆ ಮಾಡಿದ್ದಾರೆ.
ಹಣವೂ ಇಲ್ವ, ಲೋನೂ ಇಲ್ಲ!
ಹಣ ವರ್ಗಾವಣೆಯಾದ ಬಳಿಕ ಆರೋಪಿಯು ಯಾವುದೇ ಲೋನ್ ಹಣವನ್ನು ನೀಡಿಲ್ಲ. ಇದರಿಂದ ಸಂಶಯಗೊಂಡ ಪ್ರಣೀತ ಅವರು ತಾನು ಪಾವತಿಸಿದ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ, ಆರೋಪಿಯು ಲೋನ್ ಪ್ರಕ್ರಿಯೆ ಮುಗಿಯಲು ಇನ್ನು ಹೆಚ್ಚಿನ ಹಣವನ್ನು ಹಾಕುವಂತೆ ಪೀಡಿಸಿದ್ದಾನೆ. ತಾನು ಮೋಸ ಹೋಗಿರುವುದು ಖಚಿತವಾಗುತ್ತಿದ್ದಂತೆ ಪ್ರಣೀತ ಅವರು ಕುಟುಂಬಸ್ಥರೊಂದಿಗೆ ಚರ್ಚಿಸಿ ತಡವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

