ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಹಿತ್ಯದ ಓದು ಮನುಷ್ಯನ ಮನಸ್ಸಿನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ಬದುಕಿನಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ. ಬದುಕಿನ ಅನುಭವವನ್ನು ಸಾಹಿತ್ಯವು ವಿಸ್ತಾರಗೊಳಿಸುತ್ತದೆ. ಸಂಸ್ಕೃತಿಯಲ್ಲಿ ಮನುಷ್ಯನನ್ನು ಸುಸಂಸ್ಕೃತಗೊಳಿಸುತ್ತದೆ. ಇದರಿಂದ ಸಾಹಿತ್ಯದ ಓದು ಅತೀ ಮುಖ್ಯವಾಗಿದೆ ’ನಮ್ಮ ಹಿರಿಯರು ಜನಪದ ಸಾಹಿತ್ಯದ ಮೂಲಕ ಈ ಪರಂಪರೆಯನ್ನು ಬೆಳೆಸಿದ್ದಾರೆ ಎಂದು ಖ್ಯಾತ ಲೇಖಕಿ ಮತ್ತು ಪ್ರಾಧ್ಯಾಪಕಿ ಡಾ. ನಿಕೇತನಾ ಹೇಳಿದರು.
ಅವರು ಇಲ್ಲಿನ ಕುಂದಾಪುರದ ’ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆಯು ಆಯೋಜಿಸಿದ ಸಾಹಿತ್ಯ ಗೋಷ್ಠಿಯಲ್ಲಿ ವೇದಿಕೆಯ ಸದಸ್ಯರನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯ ಗೌರವಾಧ್ಯಕ್ಷರಾದ ಡಾ. ಪಾರ್ವತಿ ಜಿ. ಐತಾಳ್ ಮಾತನಾಡಿ, ಸಾಹಿತ್ಯ ಜಗತ್ತಿನಲ್ಲಿ ಭಾಷೆ-ಭಾಷೆಗಳ ನಡುವೆ ಅನುವಾದದ ಅನಿವಾರ್ಯತೆ ಆದರ್ಶ ಅಗತ್ಯ ಮಹತ್ವಗಳನ್ನು ವಿವರಿಸಿ ಒಂದು ಭಾಷೆಯಲ್ಲಿರುವ ಸಾಹಿತ್ಯದ ಬೆಳವಣಿಗೆಗೋಸ್ಕರ ನಿಸ್ವಾರ್ಥವಾಗಿ ದುಡಿಯುವ ಅನುವಾದಕರ ಸೇವೆಯನ್ನು ದುಡ್ಡಿನಿಂದ ಅಳೆಯಲಾಗುವುದಿಲ್ಲ ಎಂದರು.
ವೇದಿಕೆಯ ಅಧ್ಯಕ್ಷರಾದ ಲೇಖಕಿ ಸುಮನಾ ಹೇರ್ಳೆ ಸಭೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ಸ್ಥಳೀಯ ನೆಲೆಯಲ್ಲಿ ಮಹಿಳೆಯರಿಗಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಬಹಳ ಮುಖ್ಯ ಎಂದರು.
ವಿದುಷಿ ನಳಿನಿ ವಿ ರಾವ್ ಶಿಷ್ಯೆಯರಾದ ನಿಯತಿ ಮತ್ತು ಗೀತಾ ಮತ್ತು ಖ್ಯಾತ ಗಾಯಕಿ ಶಾರದಾ ಹೊಳ್ಳ ಅವರಿಂದ ಸುಗಮ ಸಂಗೀತ ಪ್ರಸ್ತುತಿ ನಡೆಯಿತು.
ಜೆಸ್ಸಿ ಎಲಿಝಬೆತ್ ಮತ್ತು ಸುಪ್ರೀತಾ ಪುರಾಣಿಕ್ ಅತಿಥಿಗಳನ್ನು ಪರಿಚಯಿಸಿದರು. ಸಾವಿತ್ರಿ ಪುರಾಣಿಕ್ ವಂದಿಸಿದರು. ಪೂರ್ಣಿಮಾ ಕಮಲಶಿಲೆ ಕಾರ್ಯಕ್ರಮ ನಿರೂಪಿಸಿದರು.

