ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸ್ಕೌಟ್ಸ್ , ಗೈಡ್ಸ್ ಮತ್ತು ಎನ್.ಸಿ.ಸಿ ಘಟಕದ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.
ವಿದ್ಯಾರ್ಥಿಗಳಿಗೆ ಸಸಿಗಳನ್ನು ಹಂಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಲಯ ಅರಣ್ಯಾಧಿಕಾರಿ ದಿಲೀಪ್ ಕುಮಾರ್ ಬಿ.ವಿ. ವಿಶ್ವ ಪರಿಸರ ದಿನಾಚರಣೆಯ ಧ್ಯೇಯೋದ್ದೇಶಗಳನ್ನು ತಿಳಿಸುತ್ತಾ ‘ನಮ್ಮ ಭವಿಷ್ಯದ ಭೂಮಿಯ ರಕ್ಷಣೆ ನಮ್ಮ ಹೊಣೆ’ ಎಂದು ಹೇಳಿ ಭವಿಷ್ಯದಲ್ಲಿ ಆಕ್ಸಿಜನ್ ಬ್ಯಾಗ್‌ಗಳನ್ನು ಧರಿಸಿ ಬದುಕುವ ಬದಲು ಈಗಲೇ ಸಸಿಗಳನ್ನು ನೆಡುವ ಅಭ್ಯಾಸ ಬೆಳೆಸಿಕೊಳ್ಳಿ, ನೀರನ್ನು ಹಿತ ಮಿತವಾಗಿ ಬಳಸಿ, ವಾಯು ಮಾಲಿನ್ಯವನ್ನು ತಡೆಗಟ್ಟಲು ಪ್ರಯತ್ನಿಸಿ ಎಂದು ತಿಳಿಸಿದರು.
ಉಪವಲಯ ಅರಣ್ಯಾಧಿಕಾರಿ ಪರಮೇಶ್ವರ ಪಟಗಾರ್, ಬೀಟ್ ಅರಣ್ಯ ರಕ್ಷಕರಾದ ಶಿವಣ್ಣ ಆರ್.ವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ಅಡಿಗ ಸ್ವಾಗತಿಸಿದರು. ಸಹ ಶಿಕ್ಷಕಿ ರೇಖಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಸಹ ಶಿಕ್ಷಕಿ ಚೈತ್ರಾ ವಂದನಾರ್ಪಣೆ ಸಲ್ಲಿಸಿದರು.

