ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಿವೃತ್ತ ಶಿಕ್ಷಕ, ಪತ್ರಕರ್ತ, ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ, ಮರವಂತೆ ನಿವಾಸಿ ಎಸ್. ಜನಾರ್ದನ ಮರವಂತೆ (88 ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಎಸ್. ಜನಾರ್ದನ ಮರವಂತೆ ಅವರು ರಾಜ್ಯಶಾಸ್ತ್ರ ಮತ್ತು ಆಂಗ್ಲ ಸಾಹಿತ್ಯದಲ್ಲಿ ಪ್ರತ್ಯೇಕ ಸ್ನಾತಕೋತ್ತರ ಪದವಿ, ಶಿಕ್ಷಣದಲ್ಲಿ ಸ್ನಾತಕ ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಆಂಗ್ಲ ಮತ್ತು ವಿದೇಶೀ ಭಾಷೆಗಳ ಅಧ್ಯಯನ ಸಂಸ್ಥೆಯಿಂದ ಆಂಗ್ಲಭಾಷಾ ಬೋಧನೆಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿರುವ ಜನಾರ್ದನರು ಖಂಬದಕೋಣೆ, ಕುಂದಾಪುರ, ಬೈಂದೂರು, ಶಂಕರನಾರಾಯಣದಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ, ಚಿಕ್ಕಮಗಳೂರಿನ ಸಖರಾಯಪಟ್ಟಣ ಮತ್ತು ನಾವುಂದದಲ್ಲಿ ಉಪನ್ಯಾಸಕರಾಗಿ ದುಡಿದು 1999ರಲ್ಲಿ ನಿವೃತ್ತರಾದರು.
ಶಿಕ್ಷಕ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಬಳಿಕ ತಮ್ಮ ನಿವೃತ್ತಿಯ ಬದುಕನ್ನು ಜನಾರ್ದನ ಮರವಂತೆ ಅವರು ಸಕ್ರೀಯವಾಗಿ ಕಳೆದವರು. ರಾಜಕೀಯ, ಸಾಹಿತ್ಯ, ಸಂಘಟನೆಯಲ್ಲಿ ತೊಡಗಿಸಿಕೊಂಡು ಮಾದರಿ ಕಾರ್ಯಗಳ ಮೂಲಕ ಖ್ಯಾತಿ ಗಳಿಸಿದ್ದರು. ಮರವಂತೆ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಷ್ಟ್ರಮಟ್ಟದಲ್ಲಿ ಮರವಂತೆ ಪಂಚಾಯತ್ ಗುರುತಿಸಿಕೊಳ್ಳಲು ಮಹತ್ತರ ಪಾತ್ರ ವಹಿಸಿದ್ದರು. ಅವರು ಕರ್ನಾಟಕ ಗ್ರಾಮ ಸ್ವರಾಜ್ – ಪಂಚಾಯತ್ ರಾಜ್ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ನೂರಾರು ಉಪನ್ಯಾಸಗಳನ್ನು ನೀಡಿದ್ದಾರೆ. ಗ್ರಾಮ ಆಡಳಿತ ಸಂಬಂಧಿ ಮಾರ್ಗದರ್ಶನ ಮಾಡಿದ್ದಾರೆ. ಎರಡೂವರೆ ದಶಕಗಳ ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡು ಉದಯವಾಣಿ, ಪ್ರಜಾವಾಣಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜನಾರ್ದನ ಮರವಂತೆ ಅವರು ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಅಧ್ಯಕ್ಷರಾಗಿದ್ದರು. ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದರು. ಅವರ ಜನಾಧಿಕಾರ ಪುಸ್ತಕ ನಾಲ್ಕು ಮುದ್ರಣಗಳನ್ನು ಕಂಡಿತ್ತು. ಅವರಿಗೆ ಜಿಲ್ಲಾ ರಾಜ್ಯೋತ್ಸವ, ಸದಾನಂದ ಪ್ರಶಸ್ತಿ, 2021ರಲ್ಲಿ ರಾಜ್ಯ ಸರ್ಕಾರದ ಹಿರಿಯ ನಾಗರಿಕ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. /ಕುಂದಾಪ್ರ ಡಾಟ್ ಕಾಂ/
ಎಸ್. ಜನಾರ್ದನ ಮರವಂತೆ ಅವರು ಪುತ್ರರಾದ ಟ್ಯಾಕ್ಸ್ ಕನ್ಸಲ್ಟೆಂಟ್ & ಆಡಿಟರ್ ಆಗಿರುವ ಜತೀಂದ್ರ ಮರವಂತೆ, ಬ್ರಿಸ್ಟಲ್ ನಗರದಲ್ಲಿ ಎರೋಸ್ಪೆಸ್ ಇಂಜಿನಿಯರ್ ಆಗಿರುವ ಯೋಗೀಂದ್ರ ಮರವಂತೆ, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಕುಟುಂಬಿಕರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಜೂನ್.07ರ ಭಾನುವಾರ ಬೆಳಿಗ್ಗೆ 08ರಿಂದ ಸಂಜೆ 04ರ ತನಕ ಜನಾರ್ದನ ಮರವಂತೆ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.