ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗವು ಎಂಎಸ್ಡಿಸಿ, ಮಣಿಪಾಲ ಸಹಯೋಗದಲ್ಲಿ ಆಯೋಜಿಸಿದ್ದ “ಪ್ರಾಜೆಕ್ಟ್ ಎಕ್ಸ್ಪೋ – ಸೃಜನಶೀಲತೆ ಮತ್ತು ತಂತ್ರಜ್ಞಾನದ ಸಂಗಮ” ಕಾರ್ಯಕ್ರಮದ ಸಮಾರೋಪ ಸಮಾರಂಭವು ಇತ್ತೀಚಿಗೆ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೇಯಸ್ ಸುವರ್ಣ, ಸಾನ್ವಿ ಟೆಕ್ನಾಲಜೀಸ್, ಸಾಲಿಗ್ರಾಮ ಹಾಗೂ ರಾಜಲಕ್ಷ್ಮಿ ಆನಂದನ್, ಸೆಂಟರ್ ಹೆಡ್, ಸ್ಕೂಲ್ ಆಫ್ ಐಟಿ ಸ್ಕಿಲ್ಸ್, ಎಂಎಸ್ಡಿಸಿ, ಮಣಿಪಾಲ ಭಾಗವಹಿಸಿದ್ದರು.
ಅತಿಥಿಗಳು ವಿದ್ಯಾರ್ಥಿಗಳ ನವೀನ ಯೋಜನೆಗಳನ್ನು ಶ್ಲಾಘಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿನ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಸೃಜನಶೀಲತೆ, ನವೀನ ಚಿಂತನೆ, ತಾಂತ್ರಿಕ ಕೌಶಲ್ಯ ಹಾಗೂ ಪರಿಣಾಮಕಾರಿ ಸಂವಹನ ಕೌಶಲ್ಯಗಳು ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಅತ್ಯಗತ್ಯವೆಂದು ತಿಳಿಸಿದರು. ವಿದ್ಯಾರ್ಥಿಗಳು ನಿರಂತರ ಕಲಿಕೆಯ ಮೂಲಕ ತಮ್ಮ ಜ್ಞಾನವನ್ನು ನವೀಕರಿಸಿಕೊಳ್ಳಬೇಕು ಹಾಗೂ ಉದ್ಯಮಶೀಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಈ ಪ್ರಾಜೆಕ್ಟ್ ಎಕ್ಸ್ಪೋ ಕಾರ್ಯಕ್ರಮ ಒಳ್ಳೆಯ ವೇದಿಕೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಂಯೋಜಕರಾದ ಪ್ರಣಮ್ ಆರ್. ಹಾಗೂ ಮೇಘಾ ಉಪಸ್ಥಿತರಿದ್ದರು. ಪ್ರಾಜೆಕ್ಟ್ ಎಕ್ಸ್ಪೋದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿನಿ ರಿಶಿತಾ ಪ್ರಾರ್ಥಿಸಿದರು. ವಿಭಾಗದ ಮುಖ್ಯಸ್ಥರಾದ ಮಹೇಶ್ ಕುಮಾರ್ ಪ್ರಾಸ್ತಾವಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ಜಯಲಕ್ಷ್ಮಿ ಕೆ. ಅತಿಥಿಗಳನ್ನು ಪರಿಚಯಿಸಿ, ಹರೀಶ್ ಕಾಂಚನ್ ವಿಜೇತರ ಪಟ್ಟಿ ವಾಚಿಸಿ, ವಿಭಾಗದ ಸಹ ಪ್ರಾಧ್ಯಾಪಕರಾದ ಗಿರಿರಾಜ್ ಭಟ್ ಸ್ವಾಗತಿಸಿ, ನಿರ್ಮಲ ಬಿಲ್ಲವ ಕಾರ್ಯಕ್ರಮ ನಿರೂಪಿಸಿ, ವಿಲ್ಮಾ ಶೆರಲ್ ವಂದಿಸಿದರು.

