Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ಕಂಟೇನ‌ರ್ ಲಾರಿ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ – ಬೈಕ್‌ ಸವಾರ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕಂಟೇನ‌ರ್ ಲಾರಿ ಹಾಗೂ ಬೈಕ್‌ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟ ಘಟನೆ ಸೋಮವಾರ ಸಂಜೆ ಕೋಟೇಶ್ವರ-ಹಾಲಾಡಿ ರಸ್ತೆಯ ಅಂಡರ್‌ಪಾಸ್‌ ಸಮೀಪದಲ್ಲಿ ನಡೆದಿದೆ.

ಮೃತರನ್ನು ಕೋಟೇಶ್ವರ ಮಾರ್ಕೋಡು ನಿವಾಸಿ ಪ್ರದೀಪ್‌ ಪೂಜಾರಿ (35) ಎಂದು ಗುರುತಿಸಲಾಗಿದೆ. ಅವರು ಗಾರೆ ಕೆಲಸ ಮಾಡಿಕೊಂಡಿದ್ದರು.

ಉಡುಪಿ ಕಡೆಯಿಂದ ಬಂದಿದ್ದ ಬೃಹತ್ ಕಂಟೇನರ್ ಲಾರಿಯೊಂದು ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಅಂಡರ್‌ಪಾಸ್‌ ಬಳಿ ಯು-ಟರ್ನ್ ಪಡೆಯಲು ಮುಂದಕ್ಕೆ ಸಾಗುತ್ತಿದ್ದ ವೇಳೆ, ಪೇಟೆ ಕಡೆಯಿಂದ ಹಾಲಾಡಿ ರಸ್ತೆಗೆ ತೆರಳುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ಪರಿಣಾಮ ಬೈಕ್‌ ಸಹಿತ ಕೆಳಗೆ ಬಿದ್ದ ಪ್ರದೀಪ್‌ ಪೂಜಾರಿ ಅವರ ಮೇಲೆ ಲಾರಿ ಹರಿದ ಪರಿಣಾಮ ಗಂಭೀರ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕುಂದಾಪುರ ಸಂಚಾರಿ ಠಾಣೆಯ ಪೊಲೀಸ್‌ ಉಪ ನಿರೀಕ್ಷಕ ಅನೂಪ್ ನಾಯಕ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ., ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version