ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಮಳೆಗಾಲದ ಅವಧಿಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಹಾಗೂ ಅಪಘಾತಗಳನ್ನು ತಡೆಗಟ್ಟಲು ರಾಷ್ಟ್ರೀಯ ಹೆದ್ದಾರಿ 169ಎ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಿ ಶಿವಮೊಗ್ಗ ಜಿಲ್ಲಾಡಳಿತ ಆದೇಶ ಹೊರಡಿಸಲಾಗಿದೆ. ಜೂನ್ 15 ರಿಂದ ಜಾರಿಗೆ ಬರುವಂತೆ ಮಳೆಗಾಲ ಮುಗಿಯುವವರೆಗೂ ಜಲ್ಲಿ ಮತ್ತು ಬೃಹತ್ ಸರಕು ಸಾಗಾಣೆಯ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ನಿಷೇಧದ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶದಲ್ಲಿ ತಿಳಿಸಿದ್ದಾರೆ.
ಪರ್ಯಾಯವಾಗಿ ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು, ತೀರ್ಥಹಳ್ಳಿ-ನಗರ-ನಾಗೋಡಿ-ಕೊಲ್ಲೂರು-ಕುಂದಾಪುರ-ಉಡುಪಿ ರಸ್ತೆ ಅಥವಾ ತೀರ್ಥಹಳ್ಳಿ-ಶೃಂಗೇರಿ-ಕೆರೆಕಟ್ಟೆ-ಬಜಗೋಳಿ-ಕಾರ್ಕಳ-ಉಡುಪಿ ಮಾರ್ಗವಾಗಿ ಚಲಿಸುವುದು.
ಉಡುಪಿಯಿಂದ ತೀರ್ಥಹಳ್ಳಿ ಕಡೆಗೆ ಬರುವ ವಾಹನಗಳು, ಉಡುಪಿ-ಕುಂದಾಪುರ-ಕೊಲ್ಲೂರು-ನಾಗೋಡಿ-ನಗರ-ತೀರ್ಥಹಳ್ಳಿ ಮಾರ್ಗ ಅಥವಾ ಕಾರ್ಕಳ-ಬಜಗೋಳಿ-ಕೆರೆಕಟ್ಟೆ-ಶೃಂಗೇರಿ-ತೀರ್ಥಹಳ್ಳಿ ರಸ್ತೆಯ ಮೂಲಕ ಸಂಚರಿಸಲು ಆದೇಶ ನೀಡಲಾಗಿದೆ.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ ಸಾವಿರಾರು ನಾಗರಿಕರು ತುರ್ತು ಆರೋಗ್ಯ ಚಿಕಿತ್ಸೆಗಾಗಿ ಮಣಿಪಾಲ್, ಉಡುಪಿ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯ ಮೂಲಕ ಸಂಚರಿಸಬೇಕಾಗಿದೆ. ಒಂದು ವೇಳೆ ಈ ಸಂಪರ್ಕ ಕಡಿತಗೊಂಡರೆ ನಾಲ್ಕೂ ಜಿಲ್ಲೆಗಳ ರೋಗಿಗಳಿಗೆ ಭಾರೀ ಸಮಸ್ಯೆ ಆಗಲಿದೆ. ಆದ್ದರಿಂದ ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಆದೇಶ ಹೊರಡಿಸಿದ್ದಾರೆ.

