Kundapra.com ಕುಂದಾಪ್ರ ಡಾಟ್ ಕಾಂ

ತಲ್ಲೂರಿನಲ್ಲಿ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿ ಬಂಟರ ಬಳಗ ಮಾಸಪತ್ರಿಕೆ ಆಶ್ರಯದಲ್ಲಿ ತಲ್ಲೂರಿನ ಶಾಲಾ ಮೈದಾನದಲ್ಲಿ ಭಕ್ತಿ-ಭಾವಗಳನ್ನು ಬೆಸೆಯುವ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ವೈಭವದಿಂದ ಜರುಗಿತು.

ಭೂ ವೈಕುಂಠಪತಿ ಶ್ರೀನಿವಾಸ ದೇವರು ಮತ್ತು ಪದ್ಮಾವತಿ ದೇವಿಯ ಕಲ್ಯಾಣೋತ್ಸವದ ಸಂದರ್ಭದಲ್ಲಿ ಧಾರ್ಮಿಕ ಕ್ರಿಯಾಚರಣೆಯ ಅಂಗವಾಗಿ ವೇದಿಕೆಗೆ ಶ್ರೀ ವೆಂಕಟರಮಣನ ಆಗಮನ, ವಧೂ ನಿರೀಕ್ಷಣೆ, ಪದ್ಮಾವತಿಯ ಆಗಮನ, ಅರಿಶಿನ-ಕುಂಕುಮ ಸಮರ್ಪಣೆ, ಧಾರೆ ಮಣಿ ಕಟ್ಟುವಿಕೆ, ಶ್ರೀನಿವಾಸನಿಗೆ ಮಧುಕರ್ಪ ಸಮರ್ಪಣೆ, ಮಹೂರ್ತ ನಿರೀಕ್ಷೆ, ಮಾಲಾಧಾರಣೆ, ಕನ್ಯಾದಾನ, ಕಂಕಣ, ಮಂಗಲಸೂತ್ರ ಧಾರಣೆ, ಚಿನ್ನಾಭರಣಾದಿ ಕಪ್ಪ ಕಾಣಿಕೆಗಳ ಸಮರ್ಪಣೆ, ಅಗ್ನಿ ಪ್ರತಿಷ್ಠಾಪೂರ್ವಕ ಪ್ರಧಾನ ಹೋಮ, ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆಗಳ ಬಳಿಕ ಕಲ್ಯಾಣೋತ್ಸವದ ಕೃಷ್ಣಾರ್ಪಣವಾಗಿ ಮಹಾ ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಬೆಂಗಳೂರಿನ ಶ್ರೀವಾರಿ ಫೌಂಡೇಶನ್ ಶ್ರೀನಿವಾಸ ಕಲ್ಯಾಣವನ್ನು ನಡೆಸಿಕೊಟ್ಟಿತ್ತು.

ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಜನದಟ್ಟಣೆಯನ್ನು ನಿರ್ವಹಿಸುವ ಸಲುವಾಗಿ ಸುಮಾರು 500ಕ್ಕೂ ಹೆಚ್ಚು ಸ್ವಯಂ ಸೇವಕರನ್ನು ನಿಯೋಜಿಸಲಾಗಿದ್ದು, ಪ್ರಸಾದ ರೂಪದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ, ಪ್ರಧಾನ ಸಂಚಾಲಕ ನ್ಯಾಯವಾದಿ ಟಿ. ಬಿ ಶೆಟ್ಟಿ, ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಹಟ್ಟಿಯಂಗಡಿ, ಪ್ರಧಾನ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಹಾಗೂ ಅವರ ಕುಟುಂಬಿಕರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗವಹಿಸಿದ್ದರು.

Exit mobile version