ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುರಭಿ ಶೆಟ್ಟಿ 625 ರಲ್ಲಿ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಬೈಂದೂರು ವಲಯ ಮತ್ತು ಉಡುಪಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯಾದ ಸುರಭಿಯ ಸಾಧನೆ ರಾಜ್ಯಕ್ಕೆ ಮಾದರಿ ಎಂದು ಬೈಂದೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಬಿ. ಹೇಳಿದರು.
ಅವರು ಉಪ್ಪುಂದದ ಸುರೇಶ್ ಶೆಟ್ಟಿ ಮತ್ತು ಸೀಮಾ ಶೆಟ್ಟಿ ಅವರ ಪುತ್ರಿ ಸುರಭಿ ಶೆಟ್ಟಿ ಅವರ ಮನೆಗೆ ಭೇಟಿನೀಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ವತಿಯಿಂದ ಅಭಿನಂದಿಸಿ ಮಾತನಾಡಿದರು.

ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ವಿಶ್ವೇಶ್ವರ ಅಡಿಗರು ಮಾತನಾಡಿ ಶಾಲೆಯಲ್ಲಿ ಅತ್ಯಂತ ಜವಾಬ್ದಾರಿಯುತ ವಿದ್ಯಾರ್ಥಿಯಾದ ಸುರಭಿಯ ಸಾಧನೆ ಇತರರಿಗೆ ಪ್ರೇರಣೆಯಾಗಲಿ ಎಂದು ಶುಭಹಾರೈಸಿದರು.
ಬಿ.ಆರ್.ಪಿ ರಾಮಕೃಷ್ಣ ದೇವಾಡಿಗ, ಮಂಜುನಾಥ ಶೇರುಗಾರ್, ಸುಧಾಕರ ದೇವಾಡಿಗ , ಗ್ರಾ.ಪಂ ಸದಸ್ಯರಾದ ಸತೀಶ ಶೆಟ್ಟಿ ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.. ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಸ್ವಾಗತಿಸಿ ಶುಭಹಾರೈಸಿದರು. ಎಸ್.ಎಸ್.ಎಲ್.ಸಿ. ನೋಡೆಲ್ ಅಧಿಕಾರಿ ಕರುಣಾಕರ ಶೆಟ್ಟಿ ವಂದಿಸಿ ಶುಭಹಾರೈಸಿದರು. ಸಿ.ಆರ್.ಪಿ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು.
















