ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: “12ನೇ ಶತಮಾನದಲ್ಲಿ ಬಸವಣ್ಣ ಕಂಡ ಸಮಾಜ ಸುಧಾರಣೆ ಕನಸು ಕುಂದಾಪುರ ತಾಲೂಕಿನ ಜನ್ನಾಡಿ ಮತ್ತು ಮಣಿಗೇರಿಯಲ್ಲಿ ಸಮಾಜಸೇವಕ ಎಚ್.ಎಸ್.ಶೆಟ್ಟಿ ಮೂಲಕ ಸಾಕಾರಗೊಂಡಿದೆ. ಕೊರಗ ಸಮಾಜದ 14 ಕುಟುಂಬಗಳಿಗೆ ತಲಾ 14 ಲಕ್ಷ ರೂ. ವೆಚ್ಚದಲ್ಲಿ ಅವರು ನಿರ್ಮಿಸಿರುವ 14 ಮನೆಗಳು ಕೊರಗ ಸಮಾಜದ ಪರಿವರ್ತನೆಗೆ ದಿಕ್ಯೂಚಿಯಾಗಲಿದೆ,” ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ನುಡಿದರು.
ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಜನ್ನಾಡಿ ಮತ್ತು ಮಣಿಗೇರಿ ಕೊರಗರ ಕಾಲೊನಿಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊರಗ ಕುಟುಂಬಗಳಿಗೆ ನಿರ್ಮಿಸಿ ಕೊಟ್ಟಿರುವ ಮನೆಗಳ ಹಸ್ತಾಂತರ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.


“ಉಡುಪಿ ಪೇಜಾವರ ಮಠದ ಯತಿಗಳಮಾರ್ಗದರ್ಶನದಲ್ಲಿ ಮನೆ ನಿರ್ಮಾಣಗೊಂಡಿರುವುದು ಸಂತಸ ನೀಡಿದೆ. ಮಠದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು 18 ವರ್ಷ ಹಿಂದೆ ಚನ್ನಪಟ್ಟಣದಲ್ಲಿ ದಲಿತ ಕೇರಿಯಲ್ಲಿ ಸಹಭೋಜನಕ್ಕೆ ಚಾಲನೆ ನೀಡಿ ಕ್ರಾಂತಿ ಮಾಡಿದ್ದರು. ಅವರ ಹೆಜ್ಜೆಯಲ್ಲೇ ಈಗಿನ ಯತಿಗಳು ಸಾಗುತ್ತಿದ್ದಾರೆ. ಸರಕಾರದಿಂದ ಸಾಧ್ಯವಾಗದ ಕೆಲಸವನ್ನು ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಮಾಜಸೇವಕ ಡಾ.ಎಚ್.ಎಸ್.ಶೆಟ್ಟಿ ಮಾಡಿದ್ದಾರೆ. ಮಠಗಳು, ಸಮಾಜದ ಸಿರಿವಂತರು ತಮ್ಮ ಹೆಚ್ಚುವರಿ ಹಣವನ್ನು ಅನವಶ್ಯಕ ವ್ಯಯಿಸುವ ಬದಲು ಸಮಾಜದಲ್ಲಿ ತಳಮಟ್ಟಕ್ಕೆ ತಳ್ಳಲ್ಪಟ್ಟ ಸಮಾಜಗಳ ಕಲ್ಯಾಣಕ್ಕೆ ಬಳಕೆ ಮಾಡಿದಲ್ಲಿ ರಾಮರಾಜ್ಯದ ಕನಸು ಸಾಕಾರಗೊಳ್ಳಲಿದೆ,” ಎಂದರು.
ಉಡುಪಿ ಪೇಜಾವರ ಮಠದ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಸ್ತಾಂತರಿತ ಪ್ರತಿ ಕೊರಗ ಮನೆಯಲ್ಲೂ ಗೃಹಪೂಜೆ ನೆರವೇರಿಸಿ ಆಶೀರ್ವಚನ ನೀಡಿ, “ಪ್ರತಿ ಮನೆಯೂ ರಾಮನ ಮನೆಯಾಗಿದೆ. ರಾಮಭಕ್ತಿ ಬೇರೆಯಲ್ಲ, ದೇಶಭಕ್ತಿ ಬೇರೆಯಲ್ಲ. ಆಸರೆ ಇಲ್ಲದವರಿಗೆ, ಅಶಕ್ತರಿಗೆ ಮನೆ ನಿರ್ಮಿಸಿಕೊಡುವ ಮೂಲಕ ಪ್ರತಿ ಮನೆಯಲ್ಲೂ ರಾಮಮಂದಿರ ಕಾಣ ಬಯಸುತ್ತಿದ್ದೇವೆ. ಸ್ವಂತ ನೆಲೆಯಲ್ಲಿ 5-6 ಮನೆ ನಿರ್ಮಿಸಿಕೊಟ್ಟಿದ್ದ ನನ್ನ ಉದ್ದೇಶಕ್ಕೆ ಜೀವ ತುಂಬಿದವರು ಡಾ.ಎಚ್. ಎಸ್.ಶೆಟ್ಟಿ ಅವರು. ಕೊರಗರ ಕಾಲೊನಿಯಲ್ಲಿ ಹೊಸ ಬೆಳಕು ಮೂಡಿದೆ,” ಎಂದು ಸಂತಸ ವ್ಯಕ್ತಪಡಿಸಿದರು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಪ್ರವರ್ತಕ ಡಾ. ಎಚ್.ಎಸ್.ಶೆಟ್ಟಿ ಮಾತನಾಡಿ, ”ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ವೇಳೆ ಪಾಲ್ಗೊಂಡಿದ್ದ ನನಗೆ ಪೇಜಾವರ ಯತಿಗಳು ನೀಡಿದ ಮಾರ್ಗದರ್ಶನದಿಂದ ಈ ಕಾರ್ಯ ಸಾಕಾರಗೊಂಡಿದೆ. 80 ಸಾವಿರ ವರ್ಷಗಳಿಗೂ ಮಿಕ್ಕಿ ಇತಿಹಾಸ ಹೊಂದಿರುವ ಕೊರಗ ಸಮಾಜ ಇಂದು ವಿನಾಶದಂಚಿನಲ್ಲಿದೆ. ಅವರ ಜೀನ್‌ನಲ್ಲಿ ದೈವಿಕತೆಯಿದೆ. ಬದಲಾದ ಪರಿಸ್ಥಿತಿಯಲ್ಲಿ ಅವರ ಮೂಲ ನೆಲೆ ಅಭದ್ರತೆ ಎದುರಿಸುತ್ತಿದ್ದು ಅವರು ಸಹ ಅಭದ್ರತೆಯಲ್ಲಿದ್ದಾರೆ. ಪ್ರತಿ ಮನೆಗೂ 18 ಲಕ್ಷ ವೆಚ್ಚವಾಗಿದೆ. 100 ಮನೆ ನಿರ್ಮಿಸಿಕೊಡುವುದು ನನ್ನ ಮುಂದಿನ ಗುರಿ,” ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಫಲಾನುಭವಿಗಳಿಗೆ ಮನೆಯ ಕೀಲಿ ಕೈ ವಿತರಿಸಿದರು. ಶಾಸಕ ಕಿರಣ್ ಕುಮಾರ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯ ಕೊರಗಾಭಿವೃದ್ಧಿ ಸಂಸ್ಥೆಗಳ ಅಧ್ಯಕ್ಷೆ ಸುಶೀಲ ನಾಡ, ಕೊರಗ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷ ಕುಮಾರದಾಸ, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಉಪಯೋಜನೆಯ ನಿರ್ದೇಶಕ ಗುರುನಾಥ್, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಉದ್ಯಮಿಗಳಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಹಾಲಾಡಿ ಸರ್ವೋತ್ತಮ ಹೆಗ್ಡೆ ಶಂಕರ ಹೆಗ್ಡೆ, ಹಾರ್ದಳ್ಳಿ-ಮಂಡಳ್ಳಿ ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಟ್ರಸ್ಟ್‌ನ ಉಪಾಧ್ಯಕ್ಷ ನಾಗರಾಜ ಶೆಟ್ಟಿ ಕಾರ್ಯದರ್ಶಿ ಡಾ.ಸುಮನಾ ಶೆಟ್ಟಿ ಮೊಳಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಮುರಳಿ ಕಡೇಕಾರ್ ಸ್ವಾಗತಿಸಿದರು. ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.















