ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಶಾಸಕರ ಜನಸಂಪರ್ಕ ಸಭೆ ಸ್ವಾಗತಾರ್ಹ ಆದರೆ ಕಳೆದ ಮೂರು ವರ್ಷಗಳಿಂದ ಶಾಸಕ ಸ್ಥಾನದಲ್ಲಿರುವ ಕಿರಣ್ ಕುಮಾರ್ ಕೊಡ್ಗಿ ಅವರು ಸ್ಥಳೀಯ ಸಂಸ್ಥೆಯ ಜನಪ್ರತಿನಿದಿನಗಳ ಅಧಿಕಾರವಧಿ ಮುಗಿದ ಮೇಲೆ ಈಗ ಗ್ರಾಮಗಳಲ್ಲಿ ಹೋಗಿ ಜನಸಂಪರ್ಕ ಸಭೆ ನಡೆಸುತ್ತಿರುವುದು ಅಧಿಕಾರ ವೀಕೆಂದ್ರಿಕರಣದ ವಿರೋಧಿ ಮನಸ್ಥಿತಿಯ ಭಾಗವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಟೀಕಿಸಿದ್ದಾರೆ.
ನಿರಂತರ ರಾಜ್ಯ ಸರ್ಕಾರವನ್ನು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಾ ಸುಮಾರು ಮೂರು ವರ್ಷಗಳ ಅಧಿಕಾರ ಕಳೆದ ಕುಂದಾಪುರದ ಮಾನ್ಯ ಶಾಸಕರು ಈಗ ಸರ್ಕಾರಿ ಅಧಿಕಾರಿಗಳನ್ನು ಇಟ್ಟುಕೊಂಡು ಗ್ರಾಮ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸುತ್ತಿರುವುದು ಕೇವಲ ರಾಜಕಾರಣದ ಒಂದು ಭಾಗವಾಗಿದೆ. ಕೇವಲ ಅನುದಾನ ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರವನ್ನು ಟೀಕಿಸುವ ಶಾಸಕರು ಜನಸಾಮಾನ್ಯರಿಗೆ ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಬೆಲೆ ಏರಿಕೆಯ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಬಗ್ಗೆ ಕೂಡ ಉತ್ತರವನ್ನು ನೀಡಬೇಕು. ಇವತ್ತು ಒಂದು ಕಡೆಯಲ್ಲಿ ರಾಜ್ಯ ಸರ್ಕಾರ ಅನುದಾನ ಕೊಡುತ್ತಿಲ್ಲ ಸರ್ಕಾರ ದಿವಾಳಿಯಾಗಿದೆ ಎನ್ನುವ ಶಾಸಕರು ಮತ್ತೊಂದು ಕಡೆ ಬೇರೆ ಬೇರೆ ಇಲಾಖೆಯಿಂದ ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾಮಗಾರಿಗಳಿಗೆ ಎಲ್ಲಿಂದ ಅನುದಾನ ಬಂದಿದೆ ಎನ್ನುವುದನ್ನು ಕೂಡ ಸಾರ್ವಜನಿಕವಾಗಿ ಉತ್ತರಿಸಬೇಕು.
ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಹೆದ್ದಾರಿ ಸಮಸ್ಯೆ, ರೈಲ್ವೆ ಬೇಡಿಕೆಗಳು, ಸಿ ಆರ್ ಝೆಡ್ ಮರಳುಗಾರಿಕೆಗೆ ಇರುವ ಅಡೆತಡೆಗಳು, ಪೆಟ್ರೋಲ್, ಡಿಸೇಲ್, ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯಗಳನ್ನು ಮಾನ್ಯ ಸಂಸದರ ಮೂಲಕ ಬಗೆಹರಿಸುವ ಪ್ರಯತ್ನ ಮಾಡಬೇಕು. ಮತ್ತು ಇವತ್ತಿನ ಜನಸಂಪರ್ಕ ಸಭೆಯನ್ನು ಗ್ರಾಮ ಪಂಚಾಯತ್ ನಲ್ಲಿ ಜನಪ್ರತಿನಿದಿನಗಳ ಆಡಳಿತವಿರುವಾಗ ಮಾಡಿದ್ದರೆ ರಾಜಕೀಯ ರಹಿತವಾಗಿರುವ ಗ್ರಾಮ ಪಂಚಾಯತ್ ಗಳಲ್ಲಿ ಜನರಿಂದ ಆಯ್ಕೆಯಾದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿದಿನಗಳಿಗೆ ಅವರನ್ನು ಆಯ್ಕೆ ಮಾಡಿದ ಜನರ ಆಶೋತ್ತರಗಳಿಗೆ ಸರ್ಕಾರದ ಭಾಗವಾಗಿರುವ ಶಾಸಕರ ಉಪಸ್ಥಿತಿಯಲ್ಲಿ ಸ್ಪಂದಿಸುವ ಅವಕಾಶ ಸಿಗುತ್ತಿತ್ತು. ಆದರೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿದಿನಗಳ ಅಧಿಕಾರವಧಿ ಮುಗಿದ ಮೇಲೆ ಈಗ ಶಾಸಕರು ನಡೆಸುತ್ತಿರುವ ಜನಸಂಪರ್ಕ ಸಭೆ ಅವರ ಅಧಿಕಾರ ವೀಕೆಂದ್ರಿಕರಣ ವಿರೋಧಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಟೀಕಿಸಿದ್ದಾರೆ.










