Kundapra.com ಕುಂದಾಪ್ರ ಡಾಟ್ ಕಾಂ

ಯುಎಇ ಅನಿವಾಸಿ ಕನ್ನಡಿಗರು ಕರ್ನಾಟಕಕ್ಕೆ ಮರಳಲು ನೊಂದಣಿಗೆ ಸೂಚನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ದುಬೈ: ಯು.ಎ.ಇನಲ್ಲಿರುವ ಅನಿವಾಸಿ ಕನ್ನಡಿಗರು ಕರ್ನಾಟಕಕ್ಕೆ ಮರಳಲು ಬಯಸಿದರೆ, ತಮ್ಮ ಹೆಸರನ್ನು ಕೆಎನ್‌ಆರ್‌ಐ ಫೋರಮ್-ಯುಎಇ (http://www.knriuae.com) ವೆಬ್ಸೈಟ್ ಹಾಗೂ ಯುಎಇ ಭಾರತೀಯ ರಾಯಭಾರಿ ಕಛೇರಿ  (http://www.cgidubai.gov.in)ವೆಬ್ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಹಾಗು ಪ್ರದಾನ ಕಾರ್ಯದರ್ಶಿ ಪ್ರಭಾಕರ್ ಅಂಬಲತೆರೆ ದುಬೈಯಲ್ಲಿ ಜಂಟಿಯಾಗಿ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುಎಇನ ವಿವಿಧ ರಾಜ್ಯಗಳಲ್ಲಿರುವ ಗರ್ಭಿಣಿಯರು, ಕೆಲಸ ಕಳೆದುಕೊಂಡವರು, ಇನ್ನಿತರ ಆರೋಗ್ಯ ಸಮಸ್ಯೆ ಇದ್ದವರು, ಸಂದರ್ಶನ ವಿಸಾದಲ್ಲಿ ಬಂದು ಹಿಂತಿರುಗಲು ಸಾಧ್ಯವಾಗದೆ ಇದ್ದವರು ಹಾಗೂ ವಯಸ್ಸಾದವರಿಗೆ ಕರ್ನಾಟಕಕ್ಕೆ ಹಿಂತಿರುಗಲು ಪ್ರಥಮ ಆದ್ಯತೆ ನೀಡಲಾಗುತ್ತಿದೆ.

ಕೆಎನ್‌ಆರ್‌ಐ ವೆಬ್ಸೈಟ್‌ನಲ್ಲಿ ಹೆಸರು ನೊಂದಾಯಿಸಿದ ಅನಿವಾಸಿ ಕನ್ನಡಿಗರು ಕಡ್ಡಾಯವಾಗಿ ಭಾರತ ರಾಯಬಾರಿ ಕಛೇರಿ ವೆಬ್ಸೈಟ್‌ನಲ್ಲಿಯೂ ತಮ್ಮ ಹೆಸರನ್ನು ನೊಂದಾಯಿಸಬೇಕು. ಕೆಎನ್‌ಆರ್‌ಐ ಫೋರಂ ಕರ್ನಾಟಕಕ್ಕೆ ಹಿಂದಿರುಗುವವರ ಮಾಹಿತಿ ಪಡೆದರೇ, ರಾಯಬಾರಿ ಕಚೇರಿ ಇಡೀ ಅನಿವಾಸಿ ಭಾರತೀಯರದ್ದು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.

ಹಿಂತಿರುಗಿ ಹೋಗಲು ವಿಮಾನ ಅಥವಾ ಹಡಗು ಅದರ ಟಿಕೆಟ್ ವೆಚ್ಚದ ಸಂಪೂರ್ಣ ಜವಾಬ್ದಾರಿ ಹೇಗೆ ಎಂಬುದು ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ಧಾರಕ್ಕೆ ಬಿಟ್ಟಿದ್ದು, ಆ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಈವರೆಗೆ ಸರಕಾರದಿಂದ ಹೊರಬಂದಿಲ್ಲ. ಕೆಎನ್‌ಆಐ ಫೋರಂ ಪಡೆದುಕೊಳ್ಳುವ ಸಂಪೂರ್ಣ ಮಾಹಿತಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಇಲಾಖೆಗಳಿಗೆ ನೀಡಿ ಪೂರ್ವಸಿದ್ಧತೆಗೆ ಅನುಕೂಲವಾಗಲು ಮಾಹಿತಿ ನೀಡಲಾಗುತ್ತದೆ.

ಹೆಸರು ನೊಂದಾಯಿಸುವಾಗ ಒಂದು ಕುಟುಂಬದಲ್ಲ ೪ ಮಂದಿ ಇದ್ದಲ್ಲಿ ಅವರು ಬೇರೆ ಬೇರೆಯನ್ನಾಗಿ ಹೆಸರು ನೋಂದಾಯಿಸಬೇಕು ಹಾಗೂ ಈಗ ಹಿಂತಿರುಗಿ ಹೋಗಲು ಸರಿಯಾದ ಕಾರಣವನ್ನು ತಿಳಿಸಬೇಕು. ಹಿಂತಿರುಗಿ ಹೋಗುವ ಯಾವುದೇ ಅನಿವಾಸಿ ಕನ್ನಡಿಗರು ಕೇಂದ್ರ ಹಾಗು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ನೀಡುವ ಮಾರ್ಗದರ್ಶನವನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ ಎಂದು ಕೆಎನ್‌ಆರ್‌ಐ ಫೋರಂ – ಯುಎಇ ಪ್ರಕಟಣೆಯಲ್ಲಿ ತಿಳಿಸಲಾಗಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version