Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರದ ಕೊಡಿ ಹಬ್ಬ: ಮನ್ಮಹಾರಥೋತ್ಸವ, ಹಬ್ಬ ಧಾರ್ಮಿಕ ಕಾರ್ಯಗಳಿಷ್ಟೇ ಸೀಮಿತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟೇಶ್ವರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಸೋಮವಾರ ಸಂಪನ್ನಗೊಂಡಿತು. ಬೆಳಗ್ಗೆ ಶ್ರೀದೇವರ ರಥಾರೋಹಣ ಪೂರ್ವ ವಿಧಿಗಳು ಆರಂಭಗೊಂಡವು. ತಂತ್ರಿಗಳು ಧಾರ್ಮಿಕ ವಿಧಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಶ್ರೀದೇವರಿಗೆ ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ನಡೆದ ಬಳಿಕ ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಸಂಜೆ ಬಸವನಗುಡಿ ಸನ್ನಿಧಿಯಿಂದ ಶ್ರೀದೇವರಿಗೆ ಅಭಿಮುಖವಾಗಿ ರಥ ಏಳೆದ ಬಳಿಕ ರಥಾಅವರೋಹಣದ ವಿಧಿ ಸಮಾಪನಗೊಳ್ಳುತ್ತದೆ. ಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಭಕ್ತರಿಗೆ ಸೀಮಿತ ಸಂಖ್ಯೆಯಲ್ಲಿ ಪ್ರವೇಶಕ್ಕೆ ಅವಕಾಶ ಎಂದು ಹೇಳಲಾಗಿದ್ದರೂ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ನವ ವಧುವರರು ವಾಡಿಕೆಯಂತೆ ಹಬ್ಬಕ್ಕೆ ಬಂದು ಕೊಡಿ(ಕಬ್ಬು) ಕೊಂಡು ದೇವರಿಗೆ ಪೂಜೆ ಸಲ್ಲಿಸಿದರು. ಧಾರ್ಮಿಕ ವಿಧಿ ವಿಧಾನಗಳನ್ನು ಹೊರತುಪಡಿಸಿ ಬೇರಾವುದೇ  ಜಾತ್ರೆಯ ಸಂಭ್ರಮ ಕಂಡು ಬರಲಿಲ್ಲ.  ಜಾತ್ರೆಯ ಅಂಗಡಿಗಳು, ಆಟಿಕೆ ಸಾಮಾಗ್ರಿಗಳು ಯಾವುದೂ ಇಲ್ಲದಿರುವುದರಿಂದ ಹಬ್ಬ ಎಂದಿನಂತೆ ಕಳೆಗಟ್ಟಲಿಲ್ಲ.  ಯುವಕರು ಅಡ್ಡಾಡುವ ದೃಶ್ಯ ಸಾಮಾನ್ಯವಾಗಿತ್ತು.

ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ ದೇವಳಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಹಬ್ಬದ ಸಲುವಾಗಿ ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು.

Exit mobile version