ಸೈಕಲ್‌ಗೆ ಕಾರು ಢಿಕ್ಕಿಯಾಗಿ ಸೈಕಲ್ ಸವಾರ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆಮ್ಮಾಡಿಯಿಂದ ತಲ್ಲೂರು ಕಡೆಗೆ ಸೈಕಲ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಕಾರು ಢಿಕ್ಕಿಯಾದ ಪರಿಣಾಮ ಸೈಕಲ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ತಾಲೂಕಿನ ಜಾಲಾಡಿಯಲ್ಲಿ ನಡೆದಿದೆ. ಹೆಮ್ಮಾಡಿ ಸಂತೋಷನಗರ ನಿವಾಸಿ ರಾಮ ಕುಲಾಲ್ (೬೦) ಮೃತ ದುರ್ದೈವಿ.

ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಸೈಕಲ್‌ನಲ್ಲಿ ತೆರಳುತ್ತಿರುವ ರಾಮ ಕುಲಾಲ್ ಅವರು, ಡಿವೈಡರ್ ಬದಿಯಿಂದ ರಸ್ತೆಯ ಎಡಗಡೆಗೆ ಸೈಕಲ್ ತಿರುಗಿಸಿದ ಪರಿಣಾಮ ಹಿಂದಿನಿಂದ ಬಂದ ಕಾರು ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸೈಕಲ್‌ನಲ್ಲಿದ್ದ ರಾಮ ಕುಲಾಲ್ ಅವರು ಕೆಲ ದೂರ ಹೋಗಿ ಬಿದ್ದಿದ್ದು ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿತ್ತು. ಗಂಗೊಳ್ಳಿಯ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ತಕ್ಷಣ ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರಾದರೂ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು.

ರಾಮ ಕುಲಾಲ್ ಅವರು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಹೆಮ್ಮಾಡಿ ಘಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಕೆಲ ದಿನ ಬೆಂಗಳೂರಿನಲ್ಲಿದ್ದ ಅವರು ನಿನ್ನೆಯಷ್ಟೇ ಊರಿಗೆ ವಾಪಾಸಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

20 + four =