ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಆಡಳಿತದ ವತಿಯಿಂದ ವಿಕಲಚೇತನ ಮನೆಗಳಿಗೆ ತೆರಳಿ ಆಧಾರ್ ಕಾರ್ಡ್ ನೊಂದಣಿ ಮಾಡುವ ಪ್ರಕ್ರಿಯೆಗೆ ಬೈಂದೂರಿನಲ್ಲಿ ಶುಕ್ರವಾರ ಚಾಲನೆ ನೀಡಲಾಗಿದೆ.
ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ ಎಚ್. ಎಸ್ ಅವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ನಡೆದಾಡಲು ಸಾಧ್ಯವಿಲ್ಲದ ಹಾಗೂ ಹಾಸಿಗೆಯಲ್ಲಿಯೇ ಇರುವ ವಿಕಲಚೇತನರನ್ನು ಗುರುತಿಸಿ ಅವರ ಮನೆಗಳಿಗೆ ತೆರಳಿ ಆಧಾರ್ ನೊಂದಣಿ ಮಾಡಲಾಗುತ್ತಿದೆ. ಬೈಂದೂರು ತಾಲೂಕಿನಲ್ಲಿ ಗುರುತಿಸಲಾಗಿರುವ ಸುಮಾರು 22 ವಿಕಲಚೇತನರ ಮನೆಗಳಿಗೆ ತಹಶೀಲ್ದಾರರು ಹಾಗೂ ತಾಲೂಕು ಕಛೇರಿಯಲ್ಲಿರುವ ಆಧಾರ್ ನೊಂದಣಿ ಸಿಬ್ಬಂದಿಗಳು ಲ್ಯಾಪ್‌ಟಾಪ್, ಕ್ಯಾಮರಾ, ಪ್ರಿಂಟರ್, ಆಧಾರ್ ಸ್ಪ್ಯಾನರ್ ಸಹಿತ ತೆರಳಿ ನೊಂದಣಿ ಕಾರ್ಯ ನಡೆಸಿಸುತ್ತಿದ್ದಾರೆ.
ಆಧಾರ್ ಕೇಂದ್ರಗಳಿಗೆ ಬರಲು ಸಾಧ್ಯವಿಲ್ಲದ ವಿಕಲಚೇತನರ ಮನೆಗೆ ತೆರಳಿ ಆಧಾರ್ ನೊಂದಣಿ ಮಾಡಿಸುವಂತೆ ಜಿಲ್ಲಾಡಳಿತದ ಸೂಚನೆಯಿದ್ದು ಅದರಂತೆ ಬೈಂದೂರು ತಾಲೂಕಿನ 22 ಮನೆಗಳಿಗೆ ತೆರಳಿ ಆಧಾರ್ ನೊಂದಣಿ ಮಾಡಲಾಗುತ್ತಿದೆ. ತೀರಾ ಇಂಟರ್‌ನೆಟ್ ಸಮಸ್ಯೆ ಇರುವ ಗ್ರಾಮಗಳಲ್ಲಿ ವಿಕಲಚೇತನರನ್ನು ಸಮೀಪವಿರುವ ಗ್ರಾಮ ಪಂಚಾಯತಿಗೆ ಕರೆಯಿಸಿ ಆಧಾರ್ ನೊಂದಣಿ ಮಾಡಲಾಗುತ್ತದೆ. – ಶೋಭಾಲಕ್ಷ್ಮೀ ಎಚ್. ಎಸ್., ತಹಶೀಲ್ದಾರರು ಬೈಂದೂರು