ಪಾದಾಚಾರಿ ಕೋಟ ಜೋಗಿ ಸಮಾಜದ ಅಧ್ಯಕ್ಷ ನಾರಾಯಣ ಬಳೆಗಾರ್ ಗಂಭೀರ
ನ್ಯಾಯವಾದಿ ಬನ್ನಾಡಿ ಸೋಮಶೇಖರ ಹೆಗ್ಡೆ ಅವರ ಸಮಯಪ್ರಜ್ಞೆಯಿಂದ ಗಾಯಾಳುಗಳು ಶೀಘ್ರ ಆಸ್ಪತ್ರೆಗೆ ದಾಖಲು
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಮೂರುಕೈ ರಾಷ್ಟ್ರೀಯ ಹೆದ್ದಾರಿಯ ಬಳಿ ಟೆಂಪೊವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ, ರಸ್ತೆಯ ಬದಿಯಲ್ಲಿ ಸಾಗುತ್ತಿದ್ದ ಪಾದಚಾರಿಗೆ ಢಿಕ್ಕಿ ಹೊಡೆದಿದ್ದು, ವಾಹನದಲ್ಲಿದ್ದ ಚಾಲಕ ಮತ್ತು ನಿರ್ವಾಹಕ ಸೇರಿ ಮೂವರೂ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆಯ ವೇಳೆಗೆ ವರದಿಯಾಗಿದೆ.
ಕೋಟ ಮೂರುಕೈ ಯಿಂದ ಗೋಳಿಯಂಗಡಿ ತೆರಳಲು ಯುಟರ್ನ್ ಇರುವ ಮಾರ್ಗ ಹಾಗೂ ವಿವೇಕ ಪದವಿಪೂರ್ವ ಕಾಲೇಜು ಇರುವಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋಟ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು. ಸಂಜೆ ವೇಳೆಗೆ ಉಡುಪಿ ಕಡೆಯಿಂದ ವೇಗವಾಗಿ ಬಂದ 407 ಗೂಡ್ಸ್ ವಾಹನವು ಕೋಟ ಮೂರು ಕೈ ಬಳಿಯ ಬ್ಯಾರಿಕೇಡ್ ಗಮನಿಸದೆ, ಹಠಾತ್ ಬ್ರೇಕ್ ಹಾಕುವ ಪ್ರಯತ್ನ ನಡೆಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್ಗೆ ಢಿಕ್ಕಿ ಹೊಡೆದು ವಾಹನ ಪಲ್ಟಿಯಾಗಿತ್ತು. ಇದೇ ವೇಳೆಗೆ ರಸ್ತೆ ದಾಟುತ್ತಿದ್ದ ಕೋಟ ಜೋಗಿ ಸಮಾಜದ ಅಧ್ಯಕ್ಷ ನಾರಾಯಣ ಬಳೆಗಾರ್ ಅವರಿಗೆ ವಾಹನ ಢಿಕ್ಕಿ ಹೊಡೆದ ಪರಿಣಾಮ ಅವರೂ ಗಂಭೀರ ಗಾಯಗೊಂಡಿರುವುದಲ್ಲದೇ, ವಾಹನದ ಚಾಲಕ ಮತ್ತು ನಿರ್ವಾಹಕರೀರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೇ ಮಾರ್ಗವಾಗಿ ತೆರಳುತ್ತಿದ್ದ ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆ ಅವರು ಕೂಡಲೇ ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಕರೆದೊಯ್ದು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆಗೆ ಗಂಭೀರವಾಗಿ ಏಟುಬಿದ್ದಿದ್ದ ನಾರಾಯಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದಿದ್ದರಿಂದ ಕೆಲಕಾಲ ಟ್ರಾಫಿಕ್ ಜ್ಯಾಂ ಆಗಿತ್ತು. ಸ್ಥಳಕ್ಕೆ ಕೋಟ ಪೊಲೀಸರು ಆಗಮಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.